ಅನಂತಾಡಿ ಗ್ರಾಪಂ ಕಚೇರಿ ಸ್ಥಳಾಂತರ: ಮೂರು ಪ್ರತ್ಯೇಕ ದೂರು ದಾಖಲು
ಬಂಟ್ವಾಳ: ಅನಂತಾಡಿ ಗ್ರಾ.ಪಂ. ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ವಿಟ್ಲ ಪೊಲೀಸ್ ಠಾಣೆಗೆ ಮೂರು ಪ್ರತ್ಯೇಕ ದೂರುಗಳನ್ನು ನೀಡಲಾಗಿದೆ.
ಅನಂತಾಡಿ ಗ್ರಾ.ಪಂ. ಅಧ್ಯಕ್ಷೆ ಸಮಿತಾ ಡಿ. ಪೂಜಾರಿ ಅವರಿಗೆ ಅನಂತಾಡಿ ಗ್ರಾಮದ ನಿವಾಸಿಗಳಾದ ಮೋಹನ ಶೆಟ್ಟಿ, ರಾಕೇಶ್ ಹಾಗೂ ಈಶ್ವರ ಯಾನೆ ಪ್ರವೀಣ ನಾಯ್ಕ ಎಂಬವರು ದೂರವಾಣಿ ಮೂಲಕ ಸೋಮವಾರ ಸಂಜೆ ಜೀವ ಬೆದರಿಕೆ ನೀಡಿರುವುದಾಗಿ ದೂರು ನೀಡಲಾಗಿದೆ.
ಅನಂತಾಡಿ ಕರಿಂಕ ನಿವಾಸಿಗಳಾದ ಮೋಹನಚಂದ್ರ ಹಾಗೂ ಆತನ ಸ್ನೇಹಿತ ಈಶ್ವರ ನಾಯ್ಕ ಅವರು ಸೋಮವಾರ ರಾತ್ರಿ ಪುತ್ತೂರಿನಿಂದ ಅನಂತಾಡಿಗೆ ಬೈಕ್ನಲ್ಲಿ ಬರುತ್ತಿದ್ದಾಗ ನೇರಳಕಟ್ಟೆ ಎಂಬಲ್ಲಿ ತಡೆದು ನಿಲ್ಲಿಸಿದ ಅನಂತಾಡಿ ಗ್ರಾ.ಪಂ. ಸದಸ್ಯ ಶ್ರೀಧರ ಹಾಗೂ ದೇರಣ್ಣ ಮತ್ತು ಅಬ್ಬು ಎಂಬವರು ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಲಾಗಿದ್ದು, ಹಲ್ಲೆಗೊಳಗಾದವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೇರಳಕಟ್ಟೆಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಆರಂಭಗೊಂಡ ಅನಂತಾಡಿ ಗ್ರಾ.ಪಂ. ಕಚೇರಿಯ ಕಿಟಕಿ ಗಾಜುಗಳಿಗೆ ಸೋಮವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ಬಿಸಾಡಿ ಗಾಜು ಒಡೆದು ಹಾನಿಗೊಳಿಸಿದ್ದಾರೆ ಎಂದು ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಕೆ. ಜಯರಾಮ, ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ರಾತ್ರಿ 11.45ರ ವೇಳೆಗೆ ಕಾರು ಹಾಗೂ ಎರಡು ಬೈಕ್ಗಳಲ್ಲಿ ಬಂದು ಈ ಕೃತ್ಯ ಎಸಗಿದ್ದು, ವಾಹನ ಸಂಖ್ಯೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮೂರೂ ದೂರುಗಳನ್ನು ಸ್ವೀಕರಿಸಿದ ವಿಟ್ಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರತಿಭಟನೆ: ಅನಂತಾಡಿ ಗ್ರಾ.ಪಂ. ಕಚೇರಿಯು ಬಾಬನಕಟ್ಟೆಯ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಇದನ್ನು ಅನಂತಾಡಿ ಗ್ರಾ.ಪಂ.ಗೊಳಪಟ್ಟ ನೇರಳಕಟ್ಟೆಯ ರಾಜೀವ ಗಾಂಧಿ ಸೇವಾ ಕೇಂದ್ರಕ್ಕೆ ಸ್ಥಳಾಂತರಿಸುವ ಕುರಿತು ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಬಳಿಕ ನಡೆದ ಪರ- ವಿರೋಧ ಅರ್ಜಿಗಳನ್ನು ಪರಿಶೀಲಿಸಿ ಗ್ರಾ.ಪಂ. ಕಚೇರಿಯನ್ನು ನೇರಳಕಟ್ಟೆಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದರನ್ವಯ ಶನಿವಾರ ಕಚೇರಿ ಸಾಮಗ್ರಿಗಳನ್ನು ನೇರಳಕಟ್ಟೆಗೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರ ಪ್ರಕ್ರಿಯೆಯನ್ನು ಗ್ರಾ.ಪಂ. ಸದಸ್ಯರಿಗೆ ಹಾಗೂ ಕಳೆದ ಹಲವಾರು ವರ್ಷಗಳಿಂದ ಕಚೇರಿಗೆ ಸ್ಥಳದಾನ ನೀಡಿದ ಮತ್ತು ಗ್ರಾ.ಪಂ. ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹಾಲಿ ಗ್ರಾ.ಪಂ. ಸದಸ್ಯ ಬಿ. ನರೇಂದ್ರ ರೈ ಅವರಿಗೂ ಮಾಹಿತಿ ನೀಡದೆ ಸ್ಥಳಾಂತರಗೊಳಿಸಿದ್ದು, ಗ್ರಾ.ಪಂ. ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಹಾಗೂ ಕಚೇರಿಯನ್ನು ಮತ್ತೆ ಬಾಬನಕಟ್ಟೆಯಲ್ಲೇ ಮುಂದುವರಿಸಬೇಕೆಂದು ಆಗ್ರಹಿಸಿ ಸೋಮವಾರ ಅನಂತಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.