ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಕ್ಸಲ್‌ಪೀಡಿತ ಹಳ್ಳಿಗಳಲ್ಲಿ ಮಾಸಿಲ್ಲ ಬಂದೂಕಿನ ಭಯ!

Vishwanath S
Updated On : 4 Sept 2013, 12:45 pm

ಸುಬ್ರಹ್ಮಣ್ಯ: ನಕ್ಸಲ್ ತಂಡದ ಸದಸ್ಯ ಎಲ್ಲಪ್ಪ ಎಎನ್‌ಎಫ್ ಪಡೆಯ ಯೋಧರ ಎನ್‌ಕೌಂಟರ್‌ಗೆ ಬಲಿಯಾಗಿ ಬುಧವಾರಕ್ಕೆ ಒಂದು ವರುಷ ಪೂರ್ಣಗೊಳ್ಳುತ್ತಿದೆ. ಎನ್‌ಕೌಂಟರ್ ಆಗಿ ಒಂದು ವರುಷ ಕಳೆದರೂ ಈ ಭಾಗದ ಜನತೆಯಲ್ಲಿ ಭಯ ಮಾತ್ರ ಇನ್ನೂ ಮಾಸಿಲ್ಲ.
 ಶೃಂಗೇರಿ ಹಾಗೂ ಕರಾವಳಿ ಜಿಲ್ಲೆಯ ಕಾರ್ಕಳ, ಬೆಳ್ತಂಗಡಿ ತಾಲೂಕುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ನಕ್ಸಲರ ತಂಡ ನಂತರದ ದಿನಗಳಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ಪುತ್ತೂರು, ಸುಳ್ಯ ಕಡೆ ಹೆಜ್ಜೆ ಹಾಕಿತ್ತು. ಅಡ್ಡಹೊಳೆ ರಕ್ಷಿತಾರಣ್ಯದ ಕಾಡಿನಂಚಿನಲ್ಲಿರುವ ಮನೆಗಳಿಗೆ ಪ್ರವೇಶ ನೀಡಿದ್ದರು. 2012ರ ಆ.22ರಂದು ಎರ್ಮಾಯಿಲ್, ಮರುದಿನ ಚೇರು ಗ್ರಾಮದಲ್ಲಿ, ಆ.24ರಂದು ಭಾಗ್ಯ ಎಂಬಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿದ ಕುರಿತು ಎಎನ್‌ಎಫ್ ಪಡೆಗೆ ಮಾಹಿತಿ ಲಭಿಸಿತ್ತು. ಅಲ್ಲಿಂದ ಕಾಲ್ಕಿತ್ತ ತಂಡ ನಂತರ ಕೈಕಂಬ, ನಡುತೋಟ ಕಾಡಿನ ಮುಲಕ ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯ 5 ಮನೆಗಳಿಗೆ ಭೇಟಿ ನೀಡಿತ್ತು.
ಎಲ್ಲಪ್ಪ ಹತನಾದ: ಎಎನ್‌ಎಫ್ ಪಡೆ ಕಾರ್ಯಾಚಾರಣೆ ತೀವ್ರಗೊಳಿಸಿದ ಪರಿಣಾಮ ಸೆ.4ರಂದು ನಕ್ಸಲ್ ಸದಸ್ಯ ಎಲ್ಲಪ್ಪ ಎಎನ್‌ಎಫ್ ಗುಂಡಿಗೆ ಬಲಿಯಾದ. ಸುಬ್ರಹ್ಮಣ್ಯದ ಕುಲ್ಕುಂದ- ಬಿಸಿಲೆ ಮಾರ್ಗವಾಗಿ ತೆರಳುವ ಬಿಸಿಲೆ ಗಡಿಯಲ್ಲಿ ಚೌಡೇಶ್ವರಿ ದೇವಿಯ ಗುಡಿಯಿದೆ. ಇದು ದ.ಕ ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಗಡಿ ಭಾಗ, ನಂತರ ಹಾಸನ ಜಿಲ್ಲೆಯ ವ್ಯಾಪ್ತಿಯ ಕಾಡಿನೊಳಗೆ ಸಾಗಿದರೆ ಬಾಗಿಮಲೆ ಅರಣ್ಯ ಸಿಗುತ್ತದೆ.
  ನಿರ್ಜನ ಪ್ರದೇಶ, ದಟ್ಟ ಕಾಡುಗಳಿಂದ ಆವೃತ್ತವಾದ ಗಡಿಯಿಂದ 8 ಕಿ.ಮೀ.ನಷ್ಟು ದೂರದ ದಟ್ಟ ಕಾಡಿನ ಮಧ್ಯೆ ಸಿಕ್ಕಿ ಹಾಕಿಕೊಂಡು ಎಲ್ಲಪ್ಪ ಬಲಿಯಾಗಿದ್ದರೆ, ಸಹಚರರು ಪರಾರಿಯಾಗಿದ್ದರು.
ಶರಣಾಗತಿ ನಾಟಕ- ನಂಬಿದ ಸರ್ಕಾರ: ನಂತರ ನಕ್ಸಲ್ ತಂಡ ಹಾಸನ ಜಿಲ್ಲೆಯತ್ತ ಮುಖಮಾಡಿದ್ದು ಸಕಲೇಶಪುರ, ಸಿಂಕೇರಿ ಗ್ರಾಮದಲ್ಲಿ ಕಾಣಿಸಿಕೊಂಡು ಸಿಕ್ಕಿಹಾಕಿಕೊಳ್ಳುವ ಹಂತದಲ್ಲಿ ಶರಣಾಗತಿ ಪ್ರಸ್ತಾಪದ ನಾಟಕವಾಡಿತ್ತು. ಸರ್ಕಾರ ಕಾರ್ಯಾಚರಣೆ ಮೊಟಕುಗೊಳಿಸಿದ ಪರಿಣಾಮ ನಕ್ಸಲರು ಸುರಕ್ಷಿತ ತಾಣ ತಲುಪುವಲ್ಲಿ ಯಶಸ್ವಿಯಾಗಿದ್ದರು. ಇಷ್ಟೆಲ್ಲ ಆಗಿ ಒಂದು ವರ್ಷವೇ ಕಳೆದರೂ ನಕ್ಸಲರು ಭೇಟಿ ನೀಡಿದ ದ.ಕ ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಭಯ ದೂರವಾಗಿಲ್ಲ.
ಬಂದೂಕಿನ ಭಯದಲ್ಲಿ ಗ್ರಾಮಸ್ಥರು: ಕಳೆದ ವರ್ಷ ಬೆಳ್ತಂಗಡಿ ತಾಲೂಕಿನ ಚೇರು, ಭಾಗ್ಯ, ಎರ್ಮಾಯಿಲ್, ನಡುತೋಟ ಮುಂತಾದ ಕಡೆ ನಕ್ಸಲರ ತಂಡ ಕಾಡಿನಂಚಿನ ಮನೆಗಳಿಗೆ ಭೇಟಿ ನೀಡಿ ಆಹಾರ ಸಾಮಗ್ರಿ ಹೊತ್ತೊಯ್ದದ್ದಲ್ಲದೆ, ಲ್ಯಾಪ್‌ಟಾಪ್‌ಗಳನ್ನು ರಿಚಾರ್ಜ್ ಮಾಡಿ ಮಾಹಿತಿ ಸಂಗ್ರಹಿಸಿತ್ತು.  ನಂತರ ಪಳ್ಳಿಗದ್ದೆಯ 5 ಮನೆಗಳಿಗೆ ನಿರಂತರ ನಾಲ್ಕು ದಿನ ನಕ್ಸಲರು ಭೇಟಿ ನೀಡಿದ್ದಲ್ಲದೆ, ನಕ್ಸಲರು ಮತ್ತು ಎಎನ್‌ಎಫ್ ಪಡೆಯ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.
ಜನವಿರೋಧಿ ಯೋಜನೆಗಳೇ ನಕ್ಸಲರಿಗೆ ವರದಾನ
ರಕ್ತಕ್ರಾಂತಿಯ ಮೂಲಕ ಹೋರಾಟದ ದಾರಿ ಕಂಡುಕೊಂಡ ಕೆಂಪು ಉಗ್ರರು ಕರಾವಳಿ ಜಿಲ್ಲೆಯ ಬೆಳ್ತಂಗಡಿ, ಕಾರ್ಕಳಗಳಂತಹ ಆಯ್ದ ಜಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ಕಾರ್ಯ ಚಟುವಟಿಕೆಯನ್ನು ಪುತ್ತೂರು, ಸುಳ್ಯ ವ್ಯಾಪ್ತಿಗೆ ವಿಸ್ತರಿಸಲು ಕಾರಣಗಳೂ ಇವೆ. ಯಾಕೆಂದರೆ ಆಗಷ್ಟೇ ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್ ಮುಂತಾದ ಯೋಜನೆಗಳ ಹೇರಿಕೆಯ ತೂಗುಗತ್ತಿ ಈ ಭಾಗದ ರೈತರನ್ನು ಕಾಡುತ್ತಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಕ್ಸಲರು, ಇಲ್ಲಿಯ ಜನರನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದ್ದರು.
ಗ್ರಾಮಸ್ಥರಿಗೆ ದೊರೆತಿಲ್ಲ ಸವಲತ್ತು
ಕೆಂಪು ಉಗ್ರರು ಪಳ್ಳಿಗದ್ದೆಯ 5 ಮನೆಗಳಿಗೆ ಭೇಟಿ ನೀಡಿದ ಬಳಿಕ ಆ ಮನೆಮಂದಿ ಹಲವು ಸಮಯಗಳ ತನಕ ನಿದ್ರೆಯಿಲ್ಲದೆ ಕಾಲ ಕಳೆದಿದ್ದಾರೆ. ಸಂಜೆಯಾಗುತ್ತಲೇ ಮನೆಗೆ ಬೀಗ ಹಾಕಿ ಬಂಧುಗಳ ಮನೆಗೆ ತೆರಳುತ್ತಿದ್ದರು.
  ಪರ್ಯಾಯ ವ್ಯವಸ್ಥೆ ಬಗ್ಗೆ ಬೇಡಿಕೆ ಸಲ್ಲಿಸಿದ್ದರೂ ಜನಪ್ರತಿನಿಧಿಗಳು, ಹಿರಿಯ- ಕಿರಿಯ ಅಧಿಕಾರಿಗಳು ಸಂಪೂರ್ಣ ಸಹಕಾರ ಸೌಕರ್ಯದ ಭರವಸೆಯನ್ನು ಹರಿಯಬಿಟ್ಟು ತೆರಳಿದವರು ಮತ್ತೆ ತಲೆಹಾಕಿಲ್ಲ.
ಈ ಭಾಗಗಳಿಗೆ ದಾರಿ ದೀಪದ ವ್ಯವಸ್ಥೆ, ರಸ್ತೆ ಡಾಂಬರಿಕರಣ ಇತ್ಯಾದಿ ಮೂಲಭೂತ ಸೌಕರ್ಯ ಸೇರಿದಂತೆ ವಾಸ್ತವ್ಯ ಹೊಂದಿದ ಜಾಗ ಹಾಗೂ ಕೃಷಿ ಜಾಗಗಳಿಗೆ ಇನ್ನೂ ಪಹಣಿಪತ್ರ ಒದಗಿಸಿಲ್ಲ. ನಕ್ಸಲ್ ಪ್ಯಾಕೇಜ್ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅತಂತ್ರ ಸ್ಥಿತಿಯಲ್ಲಿ ಇಲ್ಲಿಯ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ಇದು ನಕ್ಸಲರು ಬೀಡುಬಿಡಲು ಕಾರಣವಾಗಿದೆ.

-ಬಾಲಕೃಷ್ಣ ಭೀಮಗುಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement