ನಗರಾಭಿವೃದ್ಧಿಗೆ 10 ಸಾವಿರ ಕೋಟಿ ಪ್ರಸ್ತಾವನೆ: ಸೊರಕೆ
ಮಂಗಳೂರು: ರಾಜ್ಯದಲ್ಲಿ ನಗರಾಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ರು. 10 ಸಾವಿರ ಕೋಟಿ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಇದಲ್ಲದೆ ವಿಶ್ವಬ್ಯಾಂಕ್, ಹುಡ್ಕೋದಿಂದಲೂ ನೆರವು ಪಡೆದು ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗುವುದು. ಶೇ.80 ಅನುದಾನವನ್ನು ಕೇಂದ್ರ ನೀಡುತ್ತಿದ್ದು, 2040 ನಗರಾಭಿವೃದ್ಧಿ ದೃಷ್ಟಿಯಲ್ಲಿರಿಸಿ ಯೋಜನೆಯ ರೂಪುರೇಷೆ ತಯಾರಿಸಲಾಗುತ್ತಿದೆ ಎಂದರು.
ಮಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ತಲಾ ರು. 100 ಕೋಟಿ ನೆರವನ್ನು ಸರ್ಕಾರ ನೀಡಲಿದೆ. ಅಗತ್ಯ ಕೆಲಸಗಳಿಗೆ ಈ ಮೊತ್ತ ವಿನಿಯೋಗಿಸಬಹುದು. ಮಂಗಳೂರು ಪಾಲಿಕೆಗೆ 2ನೇ ಹಂತದ ರು. 100 ಕೋಟಿಯಲ್ಲಿ ರು. 15 ಕೋಟಿ ಬಂದಿದೆ. ಉಳಿದ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಈ ಮೊತ್ತದಲ್ಲಿ ಶೇ.50 ಸಾಲದ ಮೊತ್ತ ಇದೆ ಎಂದರು.
ಗ್ರೇಟರ್ ಪಾಲಿಕೆ ಪ್ರಸ್ತಾಪ: ಮಂಗಳೂರು ತಾಲೂಕಿನ ಮೂಲ್ಕಿ, ಬಜ್ಪೆ, ಗುರುಪುರ, ಉಳ್ಳಾಲ, ಕೊಣಾಜೆ ಪ್ರದೇಶಗಳನ್ನು ಪಟ್ಟಣ ಪಂಚಾಯ್ತಿ, ಪುರಸಭೆಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೆ ನಿರ್ಣಯ ಕೈಗೊಂಡಿವೆ. 2011 ಜನಗಣತಿ ಪ್ರಕಾರ ಜನಸಂಖ್ಯೆ ಅಧಾರದಲ್ಲಿ ಪಾಲಿಕೆ ಪ್ರದೇಶ ವಿಸ್ತರಣೆಗೆ ಅವಕಾಶವಿದ್ದು, ಮಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಪಾಲಿಕೆಯಾಗಿ ಉನ್ನತೀಕರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಕೆಪಾಸಿಟಿ ಬಿಲ್ಡಿಂಗ್ ಅನುಷ್ಠಾನ: ಮಂಗಳೂರು ಮತ್ತು ಉಡುಪಿಯನ್ನು ಕೇಂದ್ರ ನೆರವಿನ ಕೆಪಾಸಿಟಿ ಬಿಲ್ಡಿಂಗ್ಗೆ ಸೇರಿಸಲಾಗಿದೆ. ಈ ಯೋಜನೆಯಲ್ಲಿ 20 ಪಾಲಿಕೆ ಸೇರ್ಪಡೆಯಾಗಿದೆ. ಗುಮಾಸ್ತನಿಂದ ಸಿಬ್ಬಂದಿವರೆಗೆ ಪಾಲಿಕೆ ನೌಕರರಿಗೆ 4 ವರ್ಷದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಪೌರ ಕಾಯ್ದೆ 74 ತಿದ್ದುಪಡಿ ತಂದು ವಾರ್ಡ್ ಮಟ್ಟದಲ್ಲಿ ಸಮಿತಿ, ವಸತಿ ಸಮಿತಿ ರಚಿಸಿ ಅಭಿವೃದ್ಧಿಗೆ ಸಲಹೆಗಳನ್ನು ಆಹ್ವಾನಿಸುತ್ತೇವೆ. ಗುತ್ತಿಗೆದಾರರ ಹಿಡಿತದಿಂದ ಮುಕ್ತಗೊಳ್ಳಲು ಖಾಲಿ ಇರುವ ಪಾಲಿಕೆ ಹುದ್ದೆಗಳನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಕ್ರಮ ಸಕ್ರಮದಡಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಹಲವು ವರ್ಷಗಳಿಂದ ಹಕ್ಕುಪತ್ರಕ್ಕೆ ಕಾಯುತ್ತಿದ್ದು, ಶೀಘ್ರ ಇದಕ್ಕಿರುವ ತೊಂದರೆ ನಿವಾರಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಕುರಿತು ರಾಮಸ್ವಾಮಿ ವರದಿ ಆಧಾರದಲ್ಲಿ ಉಪ ಸಮಿತಿಯನ್ನು ಸರ್ಕಾರ ರಚಿಸಿದ್ದು, ಸಮಿತಿ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಲಿದೆ ಎಂದರು.
ಸ್ವಯಂಘೋಷಿತ ಆಸ್ತಿ ತೆರಿಗೆ, ನೀರಿನ ಕರವನ್ನು ಪಾಲಿಕೆ ನಿಯಮಾನುಸಾರ ಪಾವತಿಸಬೇಕು. ಇಲ್ಲದಿದ್ದರೆ ನಗರದ ಅಭಿವೃದ್ಧಿಗೆ, ಕೇಂದ್ರ ನೆರವಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.