ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಕ್ಕಳಿಗೆ ರಾಮಾಯಣ, ಮಹಾಭಾರತ ಅರಿವು ಮೂಡಿಸಿ: ರಮಾನಂದ ಶ್ರೀ

Vishwanath S
Updated On : 4 Sept 2013, 12:44 pm

ಬೆಳ್ತಂಗಡಿ: ಉತ್ತಮ ಕಾರ್ಯಗಳನ್ನು ಮಾಡುವುದರಿಂದ ಭಗವಂತನನ್ನು ಕಾಣಬಹುದು. ಭಾರತದಲ್ಲಿ ಸಾಮರಸ್ಯ ಮೂಡಬೇಕಾದರೆ ಮಕ್ಕಳಿಗೆ ರಾಮಾಯಣ, ಮಹಾಭಾರತಗಳ ಬಗ್ಗೆ ತಿಳಿ ಹೇಳಬೇಕು ಎಂದು ಕೊಲ್ಯ ಮಠದ ಶ್ರೀ ರಾಜಯೋಗಿ ಸದ್ಗುರು ರಮಾನಂದ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚತುರ್ಥ ವರ್ಷದ ಸದ್ಗುರು ಪಟ್ಟಾಭಿಷೇಕ ವರ್ಧಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದರು.
ಹಿದೂ ಧರ್ಮ ಸಾಗರದಷ್ಟು ಆಳ, ಆಕಾಶದಷ್ಟು ವಿಸ್ತಾರವಾಗಿದೆ. ಸದ್ಭಾವನೆಯ ರಾಷ್ಟ್ರ ನಮ್ಮದು. ಸಮಾಜದಲ್ಲಿ ಸಾಮರಸ್ಯವಿರಬೇಕಾದರೆ ಎಳವೆಯಲ್ಲಿಯೇ ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಅಧ್ಯಯನ ಮಾಡಲು ಪ್ರೇರೇಪಿಸಬೇಕು. ಶಾಂತಿ ಎಂಬುದು ಇದ್ದರೆ ಅದು ಭಾರತದಲ್ಲಿ ಮಾತ್ರ ಎಂದು ವಿದೇಶಿಯರೂ ಒಪ್ಪಿಕೊಂಡಿದ್ದಾರೆ ಎಂದ ಅವರು ಕನ್ಯಾಡಿ ಶ್ರೀಗಳು ಮಾಡುತ್ತಿರುವ ಸೇವಾಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಅತಿಥಿಯಾಗಿ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಇಲ್ಲಿನ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯುವ ಕಲ್ಯಾಣ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸರ್ಕಾರ ಎಲ್ಲ ನೆರವನ್ನು ನೀಡಲಿದೆ. ಸಮಾಜವನ್ನು ತಿದ್ದುವ ಕೆಲಸ ಸ್ವಾಮೀಜಿಗಳು ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಮೀನುಗಾರಿಕಾ ಸಚಿವ ಅಭಯಚಂದ್ರ ಮಾತನಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು. ದ.ಕ.ದ ಎಲ್ಲ ಸಚಿವರು ಮತ್ತು ಶಾಸಕರು ಒಟ್ಟಾಗಿ ಈ ಕಾರ್ಯ ಮಾಡಲಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ಶಾಸಕ ವಸಂತ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಶಿವಾನಂದ ನಾಯ್ಕ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕಾರಾಮ ಪೂಜಾರಿ, ಮಾಜಿ ಶಾಸಕ ಜೆ.ಡಿ. ನಾಯ್ಕ, ಉದ್ಯಮಿಗಳಾದ ನವೀನಚಂದ್ರ ಡಿ. ಸುವರ್ಣ, ಯಶೋಧರ ಜಿ. ನಾಯ್ಕ, ವಕೀಲ ಆರ್.ಜಿ. ನಾಯ್ಕ, ಉ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ಬಿ. ಬಂಗೇರ, ಹೊನ್ನಾವರ ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ವಾಮನ ನಾಯ್ಕ, ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಜಿಪಂ ಸದಸ್ಯ ಶೈಲೇಶ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ವಸಂತ ಪುದುವೆಟ್ಟು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು
ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯರು ವೈದಿಕ ವಿಧಿ ವಿಧಾನಗಳಿಂದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯರ ಪಟ್ಟಾಭಿಷೇಕದ ಕಾರ್ಯಗಳನ್ನು ನೆರವೇರಿಸಿದರು.
2014-15ರ 7ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಶ್ರೀ ನಾರಾಯಣ ಗುರುಗಳ ಬಗ್ಗೆ ಪಾಠವೊಂದನ್ನು ಸೇರಿಸುವ ಬಗ್ಗೆ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ.
 ಮಧು ಬಂಗಾರಪ್ಪ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement