ರೈತರ ಕಷ್ಟಕ್ಕಲ್ಲ, ರಾಹುಲ್‌ಗೆ ಸ್ಪಂದನ: ಮಾಜಿ ಸಿಎಂ ಎಚ್ಡಿಕೆ
ಮಂಗಳೂರು: ರೈತರು ಅತಿವೃಷ್ಟಿಯಿಂದ ತತ್ತರಿಸುತ್ತಿದ್ದಾರೆ. ಕೊಳೆ ರೋಗದಿಂದ ಅಡಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಇವರ ಸಮಸ್ಯೆ ಪರಿಹಾರಕ್ಕೆ ಸಮಿತಿ, ಸಭೆ ನಡೆಸಲು ಸಮಯ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಸೂಚನೆಯಂತೆ ಲೋಕಸಭೆ ಚುನಾವಣೆ ಗೆಲ್ಲಲು ತಕ್ಷಣವೇ ಸಮಿತಿ ರಚಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಎಂಟು ಬಜೆಟ್‌ಗಳನ್ನು ಮಂಡಿಸಿದ ಮಹಾನುಭಾವರು, ಪ್ರತಿಪಕ್ಷದಲ್ಲಿರುವಾಗ ರೈತರ ಪರ ಹೋರಾಟದ ಸೋಗಿನಲ್ಲಿ ಬಿಜೆಪಿ ಸರ್ಕಾರವನ್ನು ಕೀಳು ಶಬ್ದದಲ್ಲಿ ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರು ಅಧಿಕಾರ ಬಂದಾಗ ರೈತರ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ. ಸಂತ್ರಸ್ತರ ರೈತರ ಬಳಿ ತೆರಳಲು ಪುರುಸೊತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋರ್ ಕಮಿಟಿಗೆ 15 ಮಂದಿ ಸಾಕು: ಹಿರಿಯ ನಾಯಕ ನಾಣಯ್ಯ ಅವರ ಸಲಹೆಯಂತೆ ಪಕ್ಷದಲ್ಲಿ ಕೋರ್ ಕಮಿಟಿ ರಚನೆಗೆ ಸೂಚಿಸಲಾಗಿದೆ. 51 ಮಂದಿಯ ಬದಲು 15 ಅಥವಾ 16 ಮಂದಿ ಸದಸ್ಯರಿದ್ದರೆ ಉತ್ತಮ ಎಂದು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದರು.