ವಿಶ್ವಾಸ್ಗೆ ಕೇಂದ್ರ ಬಾಲಸಾಹಿತ್ಯ ಪುರಸ್ಕಾರ
ಮಂಗಳೂರು: ಸಂಸ್ಕೃತ ಭಾರತಿಯ ಹಿರಿಯ ಕಾರ್ಯಕರ್ತ ಡಾ.ಎಚ್.ಆರ್.ವಿಶ್ವಾಸ ಅವರಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.
ಮಕ್ಕಳ ಸಾಹಿತ್ಯದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಸಲ್ಲುವ ಈ ಪುರಸ್ಕಾರ ಜೀವಮಾನದ ಸಾಧನೆಗೆ ಕೊಡಲ್ಪಡುತ್ತದೆ. ಸಂಸ್ಕೃತ ಭಾಷೆಯಲ್ಲಿ ಬಾಲಸಾಹಿತ್ಯಕ್ಕಾಗಿ ಡಾ. ವಿಶ್ವಾಸ ಬರೆದ 'ಮಾರ್ಜಾಲಸ್ಯ ಮುಖಂ ದೃಷ್ಟಂ' ಎಂಬ ಸಣ್ಣ ನಾಟಕಗಳ ಸಂಗ್ರಹಕ್ಕಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ.
ನ.15ರಂದು ಗೋವಾದ ಪಣಜಿಯಲ್ಲಿ ನಡೆಯುವ ಸಮಾರಂಭದಲ್ಲಿ ರು. 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
2010ರಲ್ಲಿ ಡಾ.ಎಸ್.ಎಲ್.ಭೈರಪ್ಪನವರ 'ಆವರಣ' ಕಾಬಂದರಿಯ ಸಂಸ್ಕೃತಾನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಗಳಿಸಿದ್ದ ಡಾ.ವಿಶ್ವಾಸ, ಅದೇ ಅನುವಾದಕ್ಕೆ 2011ರಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದಲೂ ಪ್ರಶಸ್ತಿ ಪಡೆದಿದ್ದಾರೆ.
ಅಲಂಕಾರ ಶಾಸ್ತ್ರದಲ್ಲಿ ವಿದ್ವತ್ ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ಡಾ.ವಿಶ್ವಾಸ ಕನ್ನಡ ಭಾಷೆಯಲ್ಲೂ ಕಾದಂಬರಿ, ಕಥಾಸಂಕಲನ, ಜೀವನಚರಿತ್ರೆ, ಪ್ರವಾಸ ಕಥನ, ಅಂಕಣ ಬರಹ ಇತ್ಯಾದಿ ಪುಸ್ತಕ ಪ್ರಕಾಶಿಸಿದ್ದು, ಸಂಸ್ಕೃತದಲ್ಲಿ ಇವರ 15ಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿದೆ ಎಂದು ಸಂಸ್ಕೃತ ಭಾರತೀ ಕಾರ್ಯಾಲಯ ಕಾರ್ಯದರ್ಶಿ ದ.ರಾ. ಗೋವಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.