ಸೋಮಶೇಖರ ಶೆಟ್ಟಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ
ಬೆಳ್ತಂಗಡಿ: ಸುಮಾರು ಮೂರು ದಶಕಗಳ ಬಳಿಕ ತಾಲೂಕಿನ ಶಿಕ್ಷಕರೊಬ್ಬರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ ಒಲಿದಿದೆ. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಿ.ಸೋಮಶೇಖರ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2010ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2003-04ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಮುರುಘ ರಾಜೇಂದ್ರ ಮಠದ ಶಿಕ್ಷಣ ಪ್ರೇಮಿ ಪ್ರಶಸ್ತಿ, ಚಿತ್ರದುರ್ಗ ರಾಜೇಂದ್ರ ಮಠದ ರಾಜ್ಯ ಮಟ್ಟದ ಬಸವ ಜ್ಯೋತಿ ಪ್ರಶಸ್ತಿ, ಇಲಾಖೆ ವತಿಯಿಂದ 2 ವರ್ಷ ರಾಜ್ಯ ಮಟ್ಟದ ಆಶುಭಾಷಣಕ್ಕಾಗಿ ಪ್ರಶಸ್ತಿ ಪಡೆದಿರುವ ಇವರು 38 ವರ್ಷಗಳಿಂದ ಶಿಕ್ಷಕರಾಗಿದ್ದಾರೆ.
7ನೇ ತರಗತಿಯ ಸಮಾಜ ವಿಜ್ಞಾನವನ್ನು ಕಲಿಸುತ್ತಿರುವ ಸೋಮಶೇಖರ ಶೆಟ್ಟಿ ಸತತ 24 ವರ್ಷಗಳಲ್ಲಿ ಶೇ.100 ಫಲಿತಾಂಶ ಬರಲು ಕಾರಣರಾಗಿದ್ದಾರೆ. ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದವರಾದ ಅವರು ಕುಂದಾಪುರ ತಾಲೂಕು ಬೈಂದೂರಿನ ಮಯ್ಯಾಡಿ ಎಸ್ಡಿಎಂ ಹಿ.ಪ್ರಾ. ಶಾಲೆಯಲ್ಲಿ ಕೆಲಸ ಆರಂಭಿಸಿ ಬಳಿಕ ಉಜಿರೆ ಮಂಜುನಾಥೇಶ್ವರ ಶಾಲೆಯಲ್ಲಿ ಸಹ ಶಿಕ್ಷಕರಾದರು. 2012ರಿಂದ ಧರ್ಮಸ್ಥಳ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ.
ಉತ್ತಮ ಕ್ರೀಡಾಪಟು, ಸಂಘಟಕರಾಗಿರುವ ಅವರು ಜೆಸಿಐ ತರಬೇತುದಾರರಾಗಿದ್ದಾರೆ. ಸ್ವಾಸ್ಥ್ಯ ಸಂಕಲ್ಪ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ನಿಪುಣರು. ತಾಲೂಕು ಮಟ್ಟದ ವಾಲಿಬಾಲ್ ತಂಡದ ನಾಯಕರಾಗಿ 3 ಬಾರಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯ ಫುಟ್ಬಾಲ್ ಪಂದ್ಯಾಟ, ರಾಜ್ಯ ಸ್ಕೌಟ್ ಮೇಳ, ಮಹಾನಡಾವಳಿ, ಮಹಾ ಮಸ್ತಕಾಭಿಷೇಕ, ವಿಶ್ವ ತುಳು ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಸಮಿತಿಗಳ ಸಂಯೋಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಂಸ್ಕಾರ ಭಾರತಿ ಬೆಳ್ತಂಗಡಿಯ ಸದಸ್ಯರಾಗಿರುವ ಶೆಟ್ಟಿ ಅವರ ಪತ್ನಿ ಜಯಭಾರತಿ ಕೂಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.