ಅಂತರ್ಗತ ನಂಜು ದೃಷ್ಟಿ ಮೂಲಕ ಹೊರಗೆ ಪ್ರಕಟ: ರಾಘವೇಶ್ವರ ಶ್ರೀ
ವಿಟ್ಲ: ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ನಂಜು ದೃಷ್ಟಿಯ ಮೂಲಕ ಹೊರಬರುತ್ತದೆ, ಮುಂದಿನ ಕೆಡುಕನ್ನು ಸೂಚಿಸುತ್ತದೆ. ಶ್ರೀರಾಮ ಪಟ್ಟಾಭಿಷೇಕ ಸಿದ್ಧತೆ ವೇಳೆ ಮಂಥರೆಯು ಅಯೋಧ್ಯೆಯನ್ನು ಮತ್ಸರದ ದೃಷ್ಟಿಯಿಂದ ನೋಡಿದ ಸಂದರ್ಭವೂ ಇದಕ್ಕೆ ನಿದರ್ಶನ ಸಿಕ್ಕಿತ್ತು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ವಿಜಯ ಚಾತುರ್ಮಾಸ್ಯ ಆಚರಣೆ ಪ್ರಯುಕ್ತ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ರಾಮಕಥಾ ಸರಣಿಯ ಮೂರನೇ ಕಂತಿನ ಮೂರನೇ ದಿನ ಮಂಗಳವಾರ ಅವರು, ಸೀತಾನ್ವೇಷಣೆಗಾಗಿ ಸಾಗರೋಲ್ಲಂಘನ ಮಾಡುತ್ತಿದ್ದ ಆಂಜನೇಯನಿಗೆ ಮಾರ್ಗಮಧ್ಯೆ ದುಷ್ಟೆ ಸಿಂಹಿಕಕೆ ಕಿರುಕುಳ ನೀಡಿದ ಪ್ರಕರಣವನ್ನು ಕಥೆಯ ರೂಪದಲ್ಲಿ ವಿವರಿಸಿದರು.
ನೆರಳನ್ನೇ ಎಳೆದು ಜೀವಿಗಳನ್ನು ನುಂಗಬಲ್ಲ ಸಾಮರ್ಥ್ಯ ಹೊಂದಿದ್ದ ಸಿಂಹಿಕೆ ಮಹಾಬಲಿಷ್ಠ ಹನುಮಂತನನ್ನೂ ಸೆಳೆದು ನುಂಗಹೊರಟಳು. ಈ ಪ್ರಕರಣ, ಕೆಟ್ಟವರಿರುವ ಜಾಗದಲ್ಲಿ ನಮ್ಮ ನೆರಳೂ ಬೀಳಬಾರದು ಎಂಬ ಸಂದೇಶ ನೀಡುತ್ತಿದೆ ಎಂದರು.
ತರ್ಕಕ್ಕೆ ಸಿಕ್ಕದ ವೈಚಿತ್ರ್ಯ: ಪುರಾಣ ಕಾಲದಲ್ಲಿ ಸಿಂಹಿಕೆಗಿದ್ದ ಛಾಯಾಗ್ರಹಣದ ವಿಶಿಷ್ಟ ಶಕ್ತಿಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಬರ್ಮುಡಾ ಟ್ರಯಾಂಗಲ್ ವೈಚಿತ್ರಕ್ಕೆ ಹೋಲಿಸಿದ ಸ್ವಾಮೀಜಿ, ಪುರಾಣ ಕಾಲದಂತೆ ಈಗಲೂ ಇಂತಹ ವಿಚಿತ್ರ ಶಕ್ತಿಗಳು ನಮಗೆ ದೃಷ್ಟಾಂತವಾಗಿ ಸಿಗುತ್ತಿದ್ದು, ವಿಜ್ಞಾನಿಗಳಿಗೂ ಇದರ ಮೂಲ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದರು.
ಹೃದಯ ಕಳವು: ನಾವು ಎಂದು ಸಂಬೋಧಿಸುವಾಗ ನಮ್ಮ ಹೃದಯದತ್ತ ಬೊಟ್ಟು ಮಾಡುತ್ತೇವೆ. ಅಂತಹ ಹೃದಯ ಕಳವಾಯಿತು ಎಂದು ಪ್ರೀತಿಪಾತ್ರರಿಗೆ ನಾವು ಮನಸೋತಾಗ ಹೇಳುತ್ತೇವೆ. ಸಿಂಹಿಕೆಯ ಹೃದಯ ಬಗೆದ ಹನುಮಂತ, ಆಕೆಯ ಪಾಪ ಕರ್ಮಕ್ಕೆ ಸೂಕ್ತ ಪ್ರತಿಫಲ ನೀಡಿದ ಎಂದು ವಿವರಿಸಿದರು.
ನಾಲ್ಕು ಗುಣಗಳಿರಲಿ: ಸ್ಮೃತಿ, ಧೃತಿ, ಮತಿ ಹಾಗೂ ದಕ್ಷತೆ ಇದ್ದವರು ಸೋಲಲು ಸಾಧ್ಯವೇ ಇಲ್ಲ ಎಂದು ಸ್ವಾಮೀಜಿ ಹೇಳಿದರು.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರ ನಿರ್ದೇಶನದಲ್ಲಿ ಸಿಂಹಿಕೆ ಪ್ರಕರಣದ ರೂಪಕ ಪ್ರದರ್ಶನ ನಡೆಯಿತು. ಬಾಲಕೃಷ್ಣ ಶೆಟ್ಟಿ ಪಡಂಗಡಿ ಪ್ರಧಾನ ಸೇವಾಕರ್ತ, ಹರಿಕೃಷ್ಣ ಭಟ್ ಮುಡಿಪು, ಪಾತಾಳ ವೆಂಕಟ್ರಮಣ ಭಟ್ಟ ಹಾಗೂ ಕೃಷ್ಣಮೋಹನ ಭಟ್ಟ ಮಾಯಿಪ್ಪಾಡಿ ಸಹಸೇವಾಕರ್ತರಾಗಿದ್ದರು.