ಜನತೆ ಇನ್ನು ಡೀವಿಯ ನಂಬದು: ಶಕುಂತಳಾ
ಪುತ್ತೂರು: ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಡಕೆ ಬೆಳೆಗಾರರಿಗೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದೆ, ಇದೀಗ ಅಡಕೆ ಕೃಷಿಕರ ಬಗ್ಗೆ ಹೇಳಿಕೆಯ ನಾಟಕವಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ತನ್ನ ಅಧಿಕಾರ ಅವಧಿಯಲ್ಲಿ ರೈತರಿಗಾಗಿ ಏನೂ ವ್ಯವಸ್ಥೆ ಕಲ್ಪಿಸದ ಅವರಿಗೆ ಇನ್ನೊಬ್ಬರನ್ನು ಹೇಳುವ ನೈತಿಕ ಹಕ್ಕು ಇಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.
ಅವರು ಸೋಮವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಕೊಳೆರೋಗಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಚಿವ ವಿನಯಕುಮಾರ್ ಅವರ ಪ್ರಸ್ತಾವನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರು. 25 ಕೋಟಿ ಮಂಜೂರುಗೊಳಿಸಿದ್ದಾರೆ. ಅಡಕೆ ಕೊಳೆರೋಗ ಪೀಡಿತರಿಗೆ ರು. 25ನ್ನು ನೀಡದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಜಿಲ್ಲೆಯ ಜನತೆ ಇನ್ನು ನಂಬಲಾರರು ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಅವರ ಭಾವನೇ ನಿರ್ದೇಶಕರಾಗಿರುವ ಕ್ಯಾಂಪ್ಕೊ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಅಡಕೆ ಖರೀದಿ ನಡೆಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಖರೀದಿ ಮತ್ತು ಮಾರಾಟದಿಂದ ಸಂಸ್ಥೆ ಪಡೆದ ಲಾಭಾಂಶದ ಹಣವನ್ನು ಡೀವಿ ಸದಾನಂದ ಗೌಡರು ಸಾರ್ವಜನಿಕರಿಗೆ ಬಹಿರಂಗ ಪಡಿಸಲಿ ಮತ್ತು ಈ ಲಾಭಾಂಶದ ಹಣವನ್ನು ಕೊಳೆರೋಗ ಪೀಡಿತ ರೈತರಿಗೆ ಪರಿಹಾರವಾಗಿ ನೀಡಲಿ ಎಂದು ಸವಾಲು ಹಾಕಿದರು.
7 ರಂದು ಮೆಸ್ಕಾಂ ಮುಖಾಮುಖಿ: ಸರ್ಕಾರದ ಸೂಚನೆಯಂತೆ ಮೆಸ್ಕಾಂ ಇಲಾಖೆಯ ಮುಖಾಮುಖಿ ಕಾರ್ಯಕ್ರಮವು 7ರಂದು ಪುತ್ತೂರಿನ ಪುರಭವನದಲ್ಲಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಮೆಸ್ಕಾಂ ಕುರಿತ ಸಮಸ್ಯೆ ಹಾಗೂ ದೂರುಗಳಿದ್ದಲ್ಲಿ ಸೆ. 5ರೊಳಗಾಗಿ ಹೆಸರು ವಿಳಾಸಗಳ ಸಹಿತ ಲಿಖಿತವಾಗಿ ತನಗೆ ನೀಡಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರವೀಣ್ಚಂದ್ರ ಆಳ್ವ ಮತ್ತು ಸುಧಾಕರ ಶೆಟ್ಟಿ ಇದ್ದರು.