ನಾಳೆ ಬಾಗಲಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಚಾಲನೆ
ಬೆಳ್ತಂಗಡಿ: ದಕ್ಷಿಣ ಕರ್ನಾಟಕದಲ್ಲಿ ತನ್ನ ಕಾರ್ಯಕ್ರಮಗಳ ಮುಖೇನ ಬಡಜನರ ಬದುಕಿನಲ್ಲಿ ಪರಿವರ್ತನೆಗೆ ನಾಂದಿ ಹಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇದೀಗ ತನ್ನ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ವಿಸ್ತರಿಸಿದೆ. ಬಾಗಲಕೋಟೆ ಜಿಲ್ಲೆಯ ಶಂಕ್ರಪ್ಪ ಸಕ್ರಿ ಹೈಸ್ಕೂಲ್ ಮೈದಾನದಲ್ಲಿ 6ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ್ ಮತ್ತು ಸಚಿವೆ ಉಮಾಶ್ರೀ, ಜಿಲ್ಲೆಯ ಸಂಸದ ಪಿ.ಸಿ. ಗದ್ದೀಗೌಡರ, ಶಾಸಕ ಹುಲ್ಲಪ್ಪ ಯಮನಪ್ಪ ಮೇಟಿ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ರತ್ನಾಕರ ಬ್ಯಾಂಕಿನ ವತಿಯಿಂದ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬ್ಯಾಂಕಿನ ಅಧ್ಯಕ್ಷ ಅಹುಜಿ ಹಾಜರಿರುತ್ತಾರೆ. ಜಿಲ್ಲೆಯಲ್ಲಿ ಯೋಜನೆಯು ಕಾರ್ಯಾರಂಭ ಮಾಡಿದ ಅಲ್ಪ ಸಮಯದಲ್ಲಿಯೇ ತನ್ನ ಸಂಘಟನೆಯನ್ನು ಕ್ಷಿಪ್ರವಾಗಿ 2000 ಕ್ಕೂ ಮಿಕ್ಕಿದ ಸಂಘಗಳಿಗೆ ವಿಸ್ತರಿಸಿಕೊಂಡಿದೆ. ಯೋಜನೆಯು ಬಾಗಲಕೋಟೆ ಜಿಲ್ಲೆಯಲ್ಲೇ ಪ್ರಸಿದ್ಧ ಖಾಸಗಿ ಬ್ಯಾಂಕ್ ಆದ ರತ್ನಾಕರ ಬ್ಯಾಂಕಿನ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದು, ಅದರಂತೆ ರತ್ನಾಕರ ಬ್ಯಾಂಕಿನ ಶಾಖೆಯನ್ನು ಬಾಗಲಕೋಟೆಯಲ್ಲಿ ತೆರೆಯಲಾಗಿದೆ. ಕೇಂದ್ರ ಸರ್ಕಾರದ ಮತ್ತು ಆರ್ಬಿಐ ಆದೇಶದಂತೆ ಯೋಜನೆಯು ಸ್ವಸಹಾಯ ಸಂಘಗಳನ್ನು ರಚಿಸಿ ರತ್ನಾಕರ ಬ್ಯಾಂಕಿನಿಂದ ಸಂಘಗಳಿಗೆ ನೇರ ನೆರವು ದೊರಕಿಸಿಕೊಡಲಿದೆ. ಜೊತೆಯಲ್ಲಿಯೇ ಶ್ರೀ ಕ್ಷೇತ್ರದಿಂದ ಬಂದ ನುರಿತ ಕಾರ್ಯಕರ್ತರು ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.