ಬಾಣಂತಿ ಸಾವು: ದೂರು ದಾಖಲು
ಮಂಗಳೂರು: ಹೆರಿಗೆಗೆ ಎಂದು ದಾಖಲಾಗಿದ್ದ ವಾಮದಪದವು ನಿವಾಸಿ ವಿಶಾಲ(27) ಲೇಡಿಗೋಷನ್ ಆಸ್ಪತ್ರೆಯಲ್ಲಿ ದಿಢೀರ್ ಮೃತಪಟ್ಟಿದ್ದಾರೆ. ಮಗು ಹುಟ್ಟಿದ ಎರಡೇ ದಿನದಲ್ಲಿ ತಾಯಿ ಸತ್ತಿರುವುದು ಅನುಮಾನಕ್ಕೆ ಕಾರಣವಾಗಿದ್ದು ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವಿಶಾಲ ಕಳೆದ ವರ್ಷ ಡಿ.4ರಂದು ಮಸ್ಕತ್ನಲ್ಲಿ ಉದ್ಯೋಗದಲ್ಲಿರುವ ರವಿ ಎಂಬವರನ್ನು ವಿವಾಹವಾಗಿದ್ದರು. ಆ.31ರಂದು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಿದ್ದು, ಸೆ.2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಗ ಇಬ್ಬರ ಆರೋಗ್ಯ ಸರಿಯಾಗಿಯೇ ಇತ್ತು. ಬಳಿಕ ತಾಯಿ ಆರೋಗ್ಯ ಹದಗೆಡುತ್ತಾ ಹೋಯಿತು. ಕೆಎಂಸಿ ಆಸ್ಪತ್ರೆಗೆ ವಿಶಾಲಳನ್ನು ರವಾನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಮೂತ್ರ ಪಿಂಡಗಳ ವೈಫಲ್ಯ ಮತ್ತು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ. ಇದೀಗ ತಾಯಿಯನ್ನು ಕಳೆದುಕೊಂಡು ಮಗು ಅನಾಥವಾಗಿದೆ. ತಂದೆ ವಿದೇಶದಿಂದ ಇನ್ನಷ್ಟೇ ಬರಬೇಕಾಗಿದೆ. ವಿಶಾಲ ಕುಟುಂಬಸ್ಥರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ವಿರುದ್ಧ ದೂರು ನೀಡಿದ್ದಾರೆ.