ವಿವಿಧೆಡೆ ಇಂದು ಸಚಿವರ ವಿವಿಧ ಕಾರ್ಯಕ್ರಮ
ಪುತ್ತೂರು: ಪುತ್ತೂರು ಪುರಸಭೆ ಪಾಲಿಗೆ ಸವಾಲಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಇದೀಗ ಸರಳ ಹಾಗೂ ಸುಲಭ ಪ್ರಯೋಗವೊಂದಕ್ಕೆ ಮುಂದಾಗಿದೆ.
ಪುತ್ತೂರು ಪುರಸಭೆ ಮತ್ತು ಕರ್ನಾಟಕ ಇಂಟಗ್ರೇಟೆಡ್ ಡೆವಲಪ್ಮೆಂಟ್ ಸೊಸೈಟಿ (ಕಿಡ್ಸ್) ಸಂಸ್ಥೆಯು ಪುರಸಭೆ ಸದಸ್ಯ ಜಗದೀಶ್ ನೆಲ್ಲಿಕಟ್ಟೆ ಸಹಕಾರದಲ್ಲಿ ಪೈಪ್ ಕಂಪೋಸ್ಟಿಂಗ್ ಎಂಬ ಈ ನೂತನ ವಿಧಾನವನ್ನು ಅಳವಡಿಸುವ ಪ್ರಯತ್ನಕ್ಕೆ ಚಾಲನೆ ನೀಡಲಿದ್ದು, ಹಸಿ ತ್ಯಾಜ್ಯವನ್ನು ಸಾವಯವ ಎರೆಹುಳು ಗೊಬ್ಬರವಾಗಿ ಪರಿವರ್ತಿಸುವ ಮಹತ್ತರ ಪ್ರಯತ್ನಕ್ಕೆ ಮುಂದಾಗಿದೆ.
ಈ ಬಗ್ಗೆ ಬುಧವಾರ ಪುತ್ತೂರು ನಗರದ ನಿರ್ಮಾಣ ಹಂತದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ಪ್ರಾತ್ಯಕ್ಷಿಕೆಯೊಂದಿಗೆ ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಸದಸ್ಯ ಜಗದೀಶ್ ನೆಲ್ಲಿಕಟ್ಟೆ ಮತ್ತು ಕಿಡ್ಸ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಫಾ.ಜಾನ್ ಕುನ್ನತ್ತೇತ್, ಸಂಸ್ಥೆಯ ಸಂಯೋಜಕ ರವಿಚಂದ್ರ ಮಾಹಿತಿ ನೀಡಿದರು.
ಶೇ.50 ಉಳಿತಾಯ: ಪುತ್ತೂರು ಪುರಸಭೆಯು 210 ಕಿ.ಮೀ ವಿಸ್ತಾರವಾಗಿದ್ದು, 12 ಸಾವಿರಕ್ಕೂ ಅಧಿಕ ಕುಟುಂಬಗಳಿವೆ. ಇಲ್ಲಿ ದಿನವೊಂದಕ್ಕೆ 14 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಿಸಲು ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಈ ನೂತನ ಪ್ರಯತ್ನ ಅಳವಡಿಸಲಾಗುವುದು. ಇದರಿಂದಾಗಿ ಸುಮಾರು ಶೇ.40ರಷ್ಟು ಹಸಿಕಸಗಳನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಪುರಸಭೆಗೆ ಶೇ.50ರಷ್ಟು ಉಳಿತಾಯವಾಗಲಿದೆ. ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸುವ ಹಿನ್ನೆಲೆಯಲ್ಲಿ ಈ ನಿರ್ಮಾಣದಾರರಿಗೆ ಪುರಸಭೆ ಮೀಸಲು ನಿಧಿಯಿಂದ ಸಹಕಾರ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.
ಪುರಸಭೆ ಸದಸ್ಯ ಜಗದೀಶ್ ನೆಲ್ಲಿಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಆಸಕ್ತ ಪೈಪ್ಕಂಪೋಸ್ಟಿಂಗ್ ನಿರ್ಮಾಣದಾರರಿಗೆ ಎಲ್ಲ ವಿಧದ ಸಹಾಯ ಮತ್ತು ಸಹಕಾರ ನೀಡಲಾಗುವುದು. ಯೋಜನೆಯನ್ನು ಪುರಸಭೆ ವ್ಯಾಪ್ತಿಯ ಮನೆ ಮನೆಗಳಿಗೆ ತಲುಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಿಡ್ಸ್ ಸಂಸ್ಥೆಯ ನಿರ್ದೇಶಕ ಫಾ. ಜಾನ್ ಕುನ್ನತ್ತೇನ್ ಮತ್ತು ಸಂಯೋಜಕ ರವಿಚಂದ್ರ ಮಾತನಾಡಿ, ಕಸದ ಸಮಸ್ಯೆಯಿಂದ ಮುಕ್ತಿ ಹೊಂದಲು ವಿನೂತನ ಮತ್ತು ಸರಳ ಪರಿಹಾರ ಇದಾಗಿದ್ದು, ಈ ಯೋಜನೆಯಂತೆ ಕೇವಲ ರು. 500 ವೆಚ್ಚ ಮಾಡಿ 2 ಪೈಪ್ ಖರೀದಿಸುವ ಮೂಲಕ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು, ನಮ್ಮ ಕೃಷಿಗೆ ಉತ್ತಮ ಸಾವಯವ ಎರೆಹುಳು ಗೊಬ್ಬರವನ್ನು ನಾವೇ ತಯಾರಿಸಬಹುದು ಎಂದರು.
ಉಪನ್ಯಾಸಕ ರಾಜೇಶ್ ಬೆಜ್ಜಂಗಳ, ಪುರಸಭೆ ಸದಸ್ಯರಾದ ಶಕ್ತಿ ಸಿನ್ಹಾ, ಮುಖೇಶ್, ನವೀನ್ಚಂದ್ರ, ಪುರಸಭೆ ಪರಿಸರ ಎಂಜಿನಿಯರ್ ಸಹನಾ, ಸಮುದಾಯ ಅಭಿವೃದ್ಧಿ ಅಧಿಕಾರಿ ರೇಖಾ ಜೆ.ಶೆಟ್ಟಿ, ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು, ಎಂಜಿನಿಯರ್ ತುಳಸಿದಾಸ್, ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಮತ್ತಿತರರು ಇದ್ದರು.