ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗಂಗೊಳ್ಳಿ: ಬಾಲಕಿಯರ ಫೋಟೋ ತೆಗೆಯಲೆತ್ನಿಸಿ ಸಿಕ್ಕಿಬಿದ್ದ ಏಳು ಮಂದಿ ಮಾರಾಟ ಪ್ರವರ್ತಕರು

Lingaraj Badiger
Updated On : 6 Sept 2013, 10:38 am

ಗಂಗೊಳ್ಳಿ: ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಶಾಲೆ ವಿದ್ಯಾರ್ಥಿನಿಯರ ಫೋಟೋ ತೆಗೆಯಲು ಯತ್ನಿಸಿದ ಪ್ರತಿಷ್ಠಿತ ಕಂಪೆನಿಯೊಂದರ ಏಳು ಮಂದಿ ಮಾರಾಟ ಪ್ರವರ್ತಕರನ್ನು ಗಂಗೊಳ್ಳಿ ನಾಗರಿಕರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬುಧವಾರ ಸಂಜೆ ಗಂಗೊಳ್ಳಿಯಲ್ಲಿ ನಡೆದಿದೆ.
 ಗಂಗೊಳ್ಳಿಯ ಎಸ್.ವಿ. ಕಾಲೇಜು ಸಮೀಪದ ಬಸ್ ನಿಲ್ದಾಣದಲ್ಲಿ ಸಂಜೆ ಸುಮಾರು 3.45ರ ಹೊತ್ತಿಗೆ ಟಾಟಾ ಸುಮೋ ವಾಹನದಲ್ಲಿ ಆಗಮಿಸಿದ ಸುಮಾರು ಏಳು ಮಂದಿ, ವಾಹನವನ್ನು ಬಸ್ ನಿಲ್ದಾಣದ ಬಳಿ ನಿಲ್ಲಿಸಿಕೊಂಡು ಬಸ್‌ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿನಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ತೆಗೆಯಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಅಂಗಡಿ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಅಂಗಡಿ ಮಾಲೀಕರು ವಾಹನದ ಬಳಿ ತೆರಳಿ ಫೋಟೋ ತೆಗೆಯುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡು, ಫೋಟೋ ತೆಗೆಯುತ್ತಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪೊಲೀಸರು ಟಾಟಾ ಸುಮೋದಲ್ಲಿದ್ದ ಐದು ಮಂದಿ ಹುಡಗರು ಹಾಗೂ ಇಬ್ಬರು ಹುಡುಗಿಯರನ್ನು ಗಂಗೊಳ್ಳಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಇವರು ಪ್ರತಿಷ್ಠಿತ ಕಂಪೆನಿಯೊಂದರ ಮಾರಾಟ ಪ್ರವರ್ತಕರೆಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗೆ ಕಂಪೆನಿಯವರು ಬಂದ ಬಳಿಕ ಇವರನ್ನು ಬಿಡುಗಡೆ ಮಾಡಲಾಯಿತು. ಈ ವ್ಯಕ್ತಿಗಳು ಗುಲ್ಬರ್ಗ ಮೂಲದವರು ಎಂದು ಹೇಳಲಾಗುತ್ತಿದ್ದು ಇವರ ಬಳಿ ಯಾವುದೇ ಗುರುತು ಚೀಟಿ ಇರಲಿಲ್ಲ. ಇವರಿಂದ ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿ ಬೇರೆ ಬೇರೆ ಕಾಲೇಜುಗಳ ಹುಡುಗಿಯರ ಫೋಟೋಗಳಿರುವುದು ತನಿಖೆ ವೇಳೆ ಕಂಡುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement