ತಾಯಿ ಮಗು ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸಿ
ಮಂಗಳೂರು: ಪಂಜಿಮೊಗರಿನಲ್ಲಿ ನಡೆದ ತಾಯಿ, ಮಗುವಿನ ಅವಳಿ ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ 24 ಗಂಟೆಗಳ ಸತತ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ.
ನೂರಕ್ಕೂ ಹೆಚ್ಚು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದರು. ಶನಿವಾರ ಬೆಳಗ್ಗೆ 10 ಗಂಟೆವರೆಗೆ ಪ್ರತಿಭಟನೆ ನಡೆಯಲಿದೆ. ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, 2011ರ ಜೂ.28ರಂದು ತಾಯಿ ರಜಿಯಾ ಮತ್ತು ಮಗಳು ಫಾತಿಮಾಳನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪೊಲೀಸ್ ಮತ್ತು ಸಿಐಡಿ, ಹಂತಕರನ್ನು ಪತ್ತೆ ಹಚ್ಚಲು ವಿಫಲವಾಗಿದೆ. ಕೊಲೆ ತನಿಖೆಗೆಂದು ಅನೇಕ ಬಾರಿ ಮನೆಯವರು, ಸಂಬಂಧಿಕರು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಪೊಲೀಸರಿಗೆ ಇನ್ನೂ ಪ್ರಕರಣ ಇತ್ಯರ್ಥ ಪಡಿಸಲು ಸಾಧ್ಯವಾಗಿಲ್ಲ. ಕೊಲೆಯಾದ ರಜಿಯಾ ಅವರ ಪತಿ ಮತ್ತು ಸಹೋದರ ನಡುವೆ ಕದನವೂ ನಡೆಯುತ್ತಿದೆ. ಪ್ರಕರಣ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿರುವ ಯುವಕರ ಮನೆಯ ಶಾಂತಿ ಹಾಳಾಗಿ ಹೋಗಿದೆ. ನಿಜವಾದ ಹಂತಕರ ಪತ್ತೆಯಾಗಬೇಕಿದೆ. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದರೂ ಏನೂ ಬದಲಾಗಿಲ್ಲ. ಕ್ರಿಮಿನಲ್‌ಗಳು ಮೆರೆಯುತ್ತಿದ್ದಾರೆ ಎಂದರು.