ಪುತ್ತೂರು ತಾ.ಪಂ. ಅಧ್ಯಕ್ಷ ದಿಢೀರ್ ಭೇಟಿ
ಪುತ್ತೂರು: ಪುತ್ತೂರಿನ ತೋಟಗಾರಿಕಾ ಇಲಾಖೆಯ ವತಿಯಿಂದ ವಿತರಿಸಲಾದ ಬೇವಿನ ಹಿಂಡಿ ಗೊಬ್ಬರದಲ್ಲಿ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಂಪ್ಯ ಮತ್ತಿತರರು ಶುಕ್ರವಾರ ಇಲಾಖೆಯ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಗೊಬ್ಬರ ಅವ್ಯವಹಾರ ನಡೆದಿರುವುದು ಬಹಿರಂಗಗೊಂಡಿರುವುದ ತಿಳಿದು ಬಂದಿದೆ.
ಪುತ್ತೂರು ತೋಟಗಾರಿಕಾ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳಿಗೆ ಗೊಬ್ಬರ ಲಭ್ಯವಾಗುತ್ತಿಲ್ಲ ಎಂದು ಕೆಲವೊಂದು ರೈತರು ತಾ.ಪಂ. ಅಧ್ಯಕ್ಷರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇಲಾಖೆಗೆ ಎರಡು ದಿನಗಳ ಹಿಂದಷ್ಟೇ 222 ಬ್ಯಾಗ್ ಕಹಿಬೇವಿನ ಹಿಂಡಿ ಬಂದಿದ್ದು ಈ ಪೈಕಿ 134 ಬ್ಯಾಗ್ ಗೊಬ್ಬರ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಲ್ಲಿ ಇರಲಿಲ್ಲ.
ಇದರಿಂದ ಸಂಶಯಗೊಂಡ ಅಧ್ಯಕ್ಷರು ಇತರ ಕಡತಗಳನ್ನೂ ಪರಿಶೀಲನೆ ನಡೆಸಿದಾಗ ಅವಧಿಗೆ ಮುನ್ನ ಅಂದರೆ 2013 ನವೆಂಬರ್ ತಿಂಗಳಲ್ಲಿ ಕೊಕೋ ಗಿಡ ವಿತರಣೆಯಾಗಿದೆ ಎಂಬ ದಾಖಲೆಯನ್ನು ಪುಸ್ತಕದಲ್ಲಿ ಬರೆಯಲಾಗಿತ್ತು. ಇದರ ಜೊತೆಗೆ ಬಹುತೇಕ ಕಡೆಗಳಲ್ಲಿ ಪೆನ್ಸಿಲ್‌ನಿಂದಲೇ ದಾಖಲು ಮಾಡಿರುವುದು ಕಂಡು ಬಂದಿತ್ತು. ಮಾತ್ರವಲ್ಲದೆ ಈ ಎಲ್ಲಾ ಕಡತಗಳನ್ನು ತೋಟಗಾರಿಕಾ ಕಚೇರಿಯಲ್ಲಿರಿಸಿದೆ. ಒಳಭಾಗದಲ್ಲಿರಿಸಿದ್ದು ಕಂಡುಬಂತು. ಈ ಕಾರಣದಿಂದ ಅಧಿಕಾರಿಗಳು ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
ಪುತ್ತೂರು ತೋಟಗಾರಿಕಾ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಅವರು ಈಗಾಗಲೇ ವರ್ಗಾವಣೆಗಾಗಿ ಕಾಯುತ್ತಿದ್ದು ಇನ್ನು ಎರಡೇ ದಿನದಲ್ಲಿ ಅವರಿಗೆ ವರ್ಗಾವಣೆ ಆದೇಶ ಬರಲಿದ್ದು ಇದಕ್ಕೂ ಮುನ್ನ ಈ ರೀತಿಯಾಗಿ ಅವ್ಯವಹಾರ ನಡೆಸಿರುವುದಾಗಿ ದೂರಲಾಗಿದೆ.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಬಾಬು ಮಾದೋಡಿ, ಸದಸ್ಯರಾದ ಶಂಭು ಭಟ್, ದಯಾನಂದ ಆಲಡ್ಕ, ಕೃಷಿಕ ನಾರಾಯಣ ಪ್ರಕಾಶ್, ಲಕ್ಷ್ಮೀನಾರಾಯಣ ಕೆದಂಬಾಡಿ ಇದ್ದರು.
ಅವ್ಯವಹಾರ ಮಾಹಿತಿ ತಿಳಿದ ತಕ್ಷಣವೇ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯ ಗೌಡ ಸ್ಥಳಕ್ಕೆ ಆಗಮಿಸಿ ಗೊಬ್ಬರ ಪೂರೈಕೆಯ ಎಲ್ಲಾ ಕಡತಗಳನ್ನು ಹಾಗೂ ಇತರ ದಾಖಲೆಗಳನ್ನು ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ
ಅಧಿಕಾರಿ ಅಮಾನತಿಗೆ ಕೆಡಿಪಿ ಸಭೆಯಲ್ಲಿ ಸೂಚನೆ
ಪುತ್ತೂರು: ತೋಟಗಾರಿಕಾ ಇಲಾಖೆಯಲ್ಲಿ ಅವ್ಯಹಾರ ನಡೆಯುತ್ತಿದೆ. ಅನೇಕ ಸಮಯಗಳಿಮದ ಈ ದೂರುಗಳು ಬರುತ್ತಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಅಲ್ಲಿಯವರೆಗೆ ಸಂಬಂಧಿತ ಅಧಿಕಾರಿಯನ್ನು ಅಮಾನತು ಮಾಡಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷೆ ಶಶಿಪ್ರಭಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಶುಕ್ರವಾರ ತಾಲೂಕು ಕೆಡಿಪಿ ಸಭೆ ನಡೆಯಿತು. ತೋಟಗಾರಿಕೆಯ ದಾಖಲಾತಿಯಲ್ಲಿ ಯಾವುದೂ ಸಮರ್ಪಕವಾಗಿಲ್ಲ. ಆಯಾ ವಿಭಾಗಕ್ಕೆ ಸಂಬಂಧಿಸಿದ ಫೈಲುಗಳು ಎಲ್ಲೋ ಇದೆ. ರೈತರಿಗೆ ಮೋಸ ಮಾಡುವ ಕೆಲಸ ನಡೆಯುತ್ತಿದೆ. 221 ಚೀಲ ಗೊಬ್ಬರ ಬಂದಿದೆ. ಈ ಪೈಕಿ 87 ಚೀಲ ಗೊಬ್ಬರ ರೈತರಿಗೆ ನೀಡಲಾಗಿದೆ. ಉಳಿದ ಗೊಬ್ಬರ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅಧ್ಯಕ್ಷೆ ಹೇಳಿದರು.
ಈ ಕುರಿತು ಅಧಿಕಾರಿಗೆ ನೊಟೀಸ್ ಜಾರಿ ಮಾಡುವುದಾಗಿ ಕಾರ್ಯ ನಿರ್ವಹಣಾಧಿಕಾರಿ ಹೇಳಿದರು.
ಕೆಲವು ಮಂದಿ ಎಪಿಎಲ್ ಪಡಿತರ ಕಾರ್ಡನ್ನು ಬಿಪಿಎಲ್‌ಗೆ ಬದಲಾವಣೆ ಮಾಡುತ್ತಿದ್ದಾರೆ. ಬಿಪಿಎಲ್ ಪಡಿತರ ಹೊಂದಿದವರು ಬಡತನ ರೇಖೆಗಿಂತ ಕೆಳಗಿನ ಕುಟುಂಬ ಎಂದು ಸರ್ಕಾರವೇ ಪರಿಗಣಿಸಿದೆ. ಕೃಷಿ, ಆಸ್ತಿ ಇದ್ದವರು ಬಿಪಿಎಲ್ ಕಾರ್ಡ್ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅವರಿಗೇ ತೊಂದರೆಯಾಗಲಿದೆ. ಹೀಗಾಗಿ ಗಮನ ಅಗತ್ಯ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯ ಗೌಡ ಹೇಳಿದರು.
ತಾಲೂಕಿನ ಎಲ್ಲಾ ಶಾಲೆಗಳ ಜಾಗದ ಗುರುತು ಸರ್ವೇ ಮಾಡಿಸಿ ಅದಕ್ಕೆ ಬೇಲಿ ನಿರ್ಮಿಸಿ ಎಂದು ಕಳೆದ ಸಭೆಯಲ್ಲಿ ತಿಳಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೇಳಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣಾ ಇಲಾಖೆಯ ಅಧಿಕಾರಿ ಈ ಕುರಿತು ಸಿಆರ್ಪಿಗಳಿಗೆ ಆಯಾ ಶಾಲೆಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಎಂ.ಟಿ.ಕುಳ್ಳೇಗೌಡ, ಉಪಾಧ್ಯಕ್ಷ ಬಾಬು ಮಾದೋಡಿ, ಸ್ಥಾಯಿ ಸಮಿತಿಯ ದಯಾನಂದ ಇದ್ದರು.