ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾವಿಯಲ್ಲಿ ಎಂಡೋ: ಪ್ರಯೋಗಾಲಯ ವರದಿ ನೆಗೆಟಿವ್

Lingaraj Badiger
Updated On : 7 Sept 2013, 12:01 pm

ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ನೆಟ್ಟಣಿಗೆ ಮುಡ್ನೂರಿನ ಪಾಳು ಬಾವಿಯಲ್ಲಿ ಎಂಡೋಸಲ್ಫಾನ್ ಬ್ಯಾರಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಯೋಗಾಲಯ ವರದಿ ಪ್ರಕಟವಾಗಿದ್ದು, ಬಾವಿ ನೀರಿನಲ್ಲಿ ಎಂಡೋಸಲ್ಫಾನ್ ಅಂಶ ನೆಗೆಟಿವ್ ಬಂದಿದೆ.
 ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ 2 ಕಿ.ಮೀ. ದೂರದ ಕೇರಳ ಗಡಿಗೆ ಹೊಂದಿದ ಭಾಗದಲ್ಲಿ ಪ್ಲಾಂಟೇಶನ್ ಪ್ರದೇಶದ ಪಾಳುಬಾವಿಯಲ್ಲಿ ಜೂ.14ರಂದು ನಿಷೇಧಿತ ಕೀಟನಾಶಕ ಎಂಡೋಸಲ್ಫಾನ್ ಬ್ಯಾರಲ್ ಪತ್ತೆಯಾಗಿತ್ತು. ಸ್ಥಳೀಯರು ಬಾವಿ ಒಳಗೆ ಪರಿಶೀಲಿಸಿದಾಗ ಅದರಲ್ಲಿ 5ರಿಂದ 6 ಟನ್‌ನಷ್ಟು ಎಂಡೋಸಲ್ಫಾನ್ ಬ್ಯಾರಲ್ ಪತ್ತೆಯಾಗಿತ್ತು.
 ಫೆಬ್ರವರಿಯಿಂದ ಮೇ ವರೆಗೆ ಕಾಸರಗೋಡು ಗೋದಾಮಿನಿಂದ ನಾಕೂರಿನ ವಿಜ್ಞಾನಿಗಳು ಗಡಿ ಪ್ರದೇಶದ ಹಳ್ಳಿಗೆ ತಂದು ಬ್ಯಾರಲ್ ಸುರಿಯಲು ಮುಂದಾಗಿದ್ದರು. ಕೇರಳದಲ್ಲಿ ಎಂಡೋಸಲ್ಫಾನ್ ನಿಷೇಧಿಸಿದ ಕಾರಣಕ್ಕೆ ಗೋದಾಮಿನಲ್ಲಿದ್ದ ಬ್ಯಾರಲ್‌ಗಳನ್ನು ಬಿಸಾಡಲು ವಿಜ್ಞಾನಿಗಳ ತಂಡ ಆಗಮಿಸಿತ್ತು. ಸ್ಥಳೀಯರ ವಿರೋಧ ಹಿನ್ನಲೆಯಲ್ಲಿ ರಾತ್ರೋರಾತ್ರಿ ಈ ಪಾಳುಬಾವಿಗೆ ಎಸೆದು ಹೋಗಿದ್ದರು. ತಿಂಗಳ ಬಳಿಕ ಕಾವಲುಗಾರ ಅಚ್ಚುತ ಮಣಿಯಾಣಿ ಎಂಬಾತ ಈ ವಿಚಾರ ಬಾಯಿಬಿಟ್ಟಿದ್ದ.
 ಉಡುಪಿ ಮಾನವಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಜೂ.13ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹೊರಗಿದ್ದ ಬ್ಯಾರಲ್‌ನ ತುಣುಕನ್ನು ಹೆಕ್ಕಿತೆಗೆದು ಎಂಡೋಸಲ್ಫಾನ್ ದಾಸ್ತಾನು ಬಿಸಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ ನೀರಿನ ಸ್ಯಾಂಪಲ್ ಪರೀಕ್ಷೆ ನಡೆಸುವಂತೆ ಕೋರಿದ್ದರು.
 ಜೂ.16ರಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜತೆ ಮಾತುಕತೆ ನಡೆಸಿದ್ದರು. ಇದೇ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತೆರೆದ ಬಾವಿಯ ಮತ್ತು ಕೊಳವೆಬಾವಿಯ ನೀರಿನ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದರು. ಈ ಸ್ಯಾಂಪಲ್‌ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಎಂಡೋ ನೆಗೆಟಿವ್: ಜೂ.26ರಂದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ ವರದಿ ಪರೀಕ್ಷೆ ಫಲಿತಾಂಶ ಬುಧವಾರ ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಕೈಸೇರಿದೆ. ಈ ವರದಿಯಲ್ಲಿ ಎರಡು ಸ್ಯಾಂಪಲ್‌ಗಳ ಪರೀಕ್ಷೆಯಲ್ಲೂ ಎಂಡೋ ಅಂಶ ಪತ್ತೆಯಾಗಿಲ್ಲ. ಹಾಗಾಗಿ ಅಲ್ಲಿ ಬ್ಯಾರಲ್ ಸುರಿದಿದ್ದರೂ ಎಂಡೋ ಅಂಶ ಪತ್ತೆಯಾಗಿಲ್ಲ. ಇದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ಸ್ಯಾಂಪಲ್ ಸರಿಯಾಗಿ ತೆಗೆದಿಲ್ಲ: ಪ್ರಯೋಗಾಲಯ ವರದಿ ಹೀಗೆಯೇ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ ರೀತಿ ಸರಿಯಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಭಾರಿ ಮಳೆ ಬಂದಿತ್ತು. ಹಾಗಾಗಿ ಬಾವಿಯ ಮೇಲ್ಭಾಗದ ನೀರನ್ನು ಸ್ಯಾಂಪಲ್‌ಗೆ ತೆಗೆದುಕೊಂಡಿದ್ದರು. ಈ ಬಾವಿ 8 ಅಡಿ ಆಳವಿದ್ದು, ಕೇರಳ ವಿಜ್ಞಾನಿಗಳು ಬ್ಯಾರಲ್‌ನ್ನು ಹಾಕಿದ್ದಾರೆ. ಎಂಡೋ ಮುಚ್ಚಳ ತೆರೆದಿಲ್ಲದಿದ್ದರೆ ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನಿಸುತ್ತಾರೆ ಡಾ.ರವೀಂದ್ರನಾಥ ಶ್ಯಾನುಭಾಗ್.
 ಬಾವಿಗೆ ಹಾಕಿದ ಎಂಡೋ ಬ್ಯಾರಲ್‌ಗಳನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಬೇಕು. 10 ವರ್ಷದ ಹಿಂದೆ ವೈಮಾನಿಕ ಸಿಂಪರಣೆಯಿಂದ ಗಡಿ ಭಾಗದ 6 ಗ್ರಾಮಗಳಲ್ಲಿ 113 ಮಂದಿ ಅಂಗವೈಕಲ್ಯಕ್ಕೆ ಒಳಗಾಗಿರುವಾಗ ಎಂಡೋ ನೀರಿಗೆ ಸೇರಿದ್ದರೆ ಅನಾಹುತ ಊಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಡಾ.ಶ್ಯಾನುಭಾಗ್.
ಗ್ರಾಮ ಪಂಚಾಯ್ತಿ ನಿರ್ಣಯ: ನೆಟ್ಟಣಿಗೆ ಮುಡ್ನೂರಿನ ಗ್ರಾಮ ಪಂಚಾಯ್ತಿ ಬಾವಿಯಿಂದ ಎಂಡೋ ಬ್ಯಾರಲ್ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಂಡಿದೆ.
 ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಉಭಯ ರಾಜ್ಯಗಳ ಜತೆ ಮಾತುಕತೆ ನಡೆಸಿ ಬ್ಯಾರಲ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀರಾಮ ಪಕ್ಕಳ.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement