ಮಂಗಳೂರು: ತಂಪೆರೆದ ಮಳೆ
ಮಂಗಳೂರು: ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಳೆ, ಶುಕ್ರವಾರ ಸಂಜೆ ನಗರದಲ್ಲಿ ಸುರಿದಿದೆ. ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು.
ಸುಡು ಬಿಸಿಲಿನಿಂದ ಕಂಗಾಲಾಗಿದ್ದ ಜನತೆ ಸಂಜೆ ಸುರಿದ ಮಳೆಯಿಂದ ಖುಷಿಗೊಂಡರು. ಛತ್ರಿ ಮರೆತು ಬಂದ ಜನ ಮರ ಮತ್ತು ಅಂಗಡಿಯ ಬದಿಯನ್ನು ಆಶ್ರಯಿಸಿದರೆ, ವಿದ್ಯಾರ್ಥಿಗಳು, ಯುವಕರು ತುಂತುರು ಮಳೆಗೆ ನೆನೆದು ಮೈ ತಂಪಾಗಿಸಿದರು.
ಅಪಘಾತ: ಕೆಎಸ್‌ರಾವ್ ರಸ್ತೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಮುಂಭಾಗದ ತಿರುವಿನಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸಹಸವಾರರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದೆ.
ಇಲ್ಲಿ ವಿದ್ಯುತ್ ಕಂಬವನ್ನು ಮಧ್ಯಭಾಗದಲ್ಲಿ ಹಾಗೆಯೇ ಬಿಟ್ಟು ರಸ್ತೆಬದಿಗೆ ಫುಟ್‌ಪಾತ್ ನಿರ್ಮಿಸಲಾಗಿದೆ.
ಇದರ ಪರಿಣಾಮ ಈ ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ಸಂಚರಿಸುವ ವಾಹನಗಳು ಪರದಾಡುವಂತಾಗಿದೆ. ಕೋರ್ಟ್ ರಸ್ತೆಯಿಂದ, ಪಿವಿಎಸ್‌ನಿಂದ ಬರುವ ರಿಕ್ಷಾ, ದ್ವಿಚಕ್ರ ಈ ಭಾಗದಲ್ಲಿ ಸವಾರರು ತಬ್ಬಿಬ್ಬಾಗಿ ಅನೇಕ ಅಪಘಾತ ನಡೆದಿದೆ.
ಈ ಸ್ಥಳದಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿದರೆ ಉಳಿದ ಕಾರು, ರಿಕ್ಷಾ, ಲಾರಿ ವಾಹನಗಳು ಒಂದೊಂದಾಗಿ ಸರತಿ ಸಾಲಿನಲ್ಲಿ ಸಾಗಬೇಕಾಗುತ್ತದೆ. ಅಲ್ಲದೆ ಇತ್ತೀಚೆಗಷ್ಟೆ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಫುಟ್‌ಪಾತ್ ನಿರ್ಮಿಸಲಾಗಿದೆ. ನಗರದ ಮಧ್ಯಭಾಗದಲ್ಲಿ ಆಗಿರುವ ಲೋಪವನ್ನು ನೋಡಿಯೂ ನೋಡದಂತೆ ಪಾಲಿಕೆ ಕಣ್ಣುಚ್ಚಿ ಕುಳಿತಿರುವುದು ವಿಪರ್ಯಾಸ.