ಕೊಳೆರೋಗದಿಂದ 1,800 ಕೋಟಿ ಫಸಲು ಹಾನಿ
ಮಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಅಡಕೆ ತೋಟಕ್ಕೆ ಕೊಳೆರೋಗದಿಂದ ರು. 1800 ಕೋಟಿಗೂ ಮಿಕ್ಕಿ ಫಸಲು ಹಾನಿ ಅಂದಾಜಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದ್ದಾರೆ.
ಶನಿವಾರ ಕ್ಯಾಂಪ್ಕೋ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ದ.ಕ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು. ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರಂ, ತ್ರಿಶೂರ್ ಮತ್ತು ಕಲ್ಲಿಕೋಟೆಗಳಲ್ಲಿ ಅಡಕೆ ತೋಟಕ್ಕೆ ಕೊಳೆರೋಗ ಕಾಣಿಸಿದೆ.
ರಾಜ್ಯದಲ್ಲಿ ಸುಮಾರು 2.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.79 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆಯಾಗುತ್ತಿದ್ದು, ಕೇರಳದಲ್ಲಿ 96,600 ಹೆಕ್ಟೇರ್ನಲ್ಲಿ 96,300 ಮೆಟ್ರಿಕ್ ಟನ್ ಅಡಕೆ ಬೆಳೆಯುತ್ತಾರೆ. ರಾಜ್ಯದಲ್ಲಿ ಕೊಳೆರೋಗದಿಂದ ಶೇ.60ರಿಂದ 70 ಬೆಳೆಹಾನಿ ನಿರೀಕ್ಷಿಸಿದ್ದು, ರು. 1,200 ಕೋಟಿ ನಷ್ಟ, ಕೇರಳದಲ್ಲಿ ಇಷ್ಟೇ ಪ್ರಮಾಣದಲ್ಲಿ ಬೆಳೆಹಾನಿ ಅಂದಾಜಿಸಲಾಗಿದ್ದು, ರು. 800 ಕೋಟಿ ನಷ್ಟ ಹೇಳಲಾಗಿದೆ.
2 ಲಕ್ಷ ಟನ್ ಅಡಕೆ ಖೋತಾ: ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೀರೂರುಗಳಲ್ಲಿ ಶೇ.25 ಅಡಕೆ ತೋಟ ಅನಾವೃಷ್ಟಿಗೆ ನಾಶವಾಗಿದ್ದು ರು. 600 ಕೋಟಿ ಬೆಳೆ ಹಾನಿ ಅಂದಾಜಿಸಲಾಗಿದೆ. ಮುಂದಿನ ವರ್ಷ ರಾಜ್ಯ ಮತ್ತು ಕೇರಳದಿಂದ ಸುಮಾರು 2 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಅಡಕೆ ಮಾರಾಟಕ್ಕೆ ಕಡಿಮೆಯಾಗಲಿದೆ ಎಂದರು.
ಸಿಎಂ ನಿಯೋಗ ಕೇಂದ್ರಕ್ಕೆ: ಶುಕ್ರವಾರ ಬೆಂಗಳೂರಿನಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಬೆಳೆಗಾರರು, ಪ್ರಮುಖ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು, ಶಾಸಕರ ತಂಡದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದೆ. ಮುಖ್ಯಮಂತ್ರಿಗಳು ಬೆಳೆಗಾರರ ಪರ ಸ್ಪಂದಿಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಕ್ಯಾಂಪ್ಕೋ ಕಡೆಯಿಂದಲೂ ಕೇಂದ್ರ ಸರ್ಕಾರಕ್ಕೆ ಅಡಕೆ ಬೆಳೆಗಾರರ ನಿಯೋಗ ಕರೆದೊಯ್ದು ಮುಖ್ಯಮಂತ್ರಿಯ ನೇತೃತ್ವ ವಹಿಸುವಂತೆ ವಿನಂತಿ ಮಾಡಲಾಗಿದೆ. ಕೊಳೆರೋಗಕ್ಕೆ ಸೂಕ್ತ ಔಷಧಿಯ ಸಂಶೋಧನೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
ಕೇರಳಕ್ಕೂ ನಿಯೋಗ: ಕೇರಳ ಸರ್ಕಾರದಿಂದಲೂ ಪರಿಹಾರ ದೊರಕಿಸುವ ನಿಟ್ಟಿಸುವಲ್ಲಿ ನಿಯೋಗ ತೆರಳಿ ಮನವಿ ಸಲ್ಲಿಸಲಿದೆ. ಕೇರಳದಲ್ಲಿ ಜಾರಿಯಲ್ಲಿರುವ ಮಾರಾಟ ತೆರಿಗೆ ಇತರ ರಾಜ್ಯಗಳಿಗಿಂತ ಅಧಿಕವಾಗಿದ್ದು, ಅಲ್ಲಿ ಖರೀದಿ ಮತ್ತು ಮಾರಾಟಕ್ಕೆ ಅಡಚಣೆಯಾಗುತ್ತಿದೆ. ಇದನ್ನು ಕೇರಳ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಅಡಕೆ ಧಾರಣೆ ಸ್ಥಿರ: ದೇಶದಲ್ಲಿ ಅಡಕೆ ಆಮದು ಸಂಪೂರ್ಣ ನಿಯಂತ್ರಣದಲ್ಲಿರುವುದರಿಂದ ಮತ್ತು ಪ್ರಸ್ತುತ ಅತಿವೃಷ್ಟಿ, ಅನಾವೃಷ್ಟಿ ಕಾರಣದಿಂದ ಮುಂದಿನ ವರ್ಷ ಅಡಕೆ ಆವಕ ಕಡಿಮೆಯಾಗುವ ಹಿನ್ನೆಲೆಯಲ್ಲಿ ಚಾಲಿ ಮತ್ತು ಕೆಂಪು ಅಡಕೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಯೋಗ್ಯ ದರ ಮುಂದುವರಿಯಲಿದೆ. ಬೆಳೆಗಾರರಿಗೆ ಅಡಕೆ ಮಾರಾಟಕ್ಕೆ ಅನುಕೂಲವಾಗಲು ವಾರದಲ್ಲಿ 6 ದಿನ ಖರೀದಿ ಶಾಖೆ ತೆರೆಯಲು ನಿರ್ಧರಿಸಿದ್ದು, ಬೆಳ್ಳಾರೆಯಲ್ಲಿ ಶಾಖೆ ಪ್ರಾರಂಭಿಸಲಾಗಿದೆ. ಸೆ.29ರಂದು ಗುಜರಾತ್ನ ಪೋರ್ಬಂದರ್ನಲ್ಲಿ ಮಾರಾಟ ಶಾಖೆ ಪ್ರಾರಂಭಿಸಲಿದ್ದೇವೆ ಎಂದರು.
ಚಾಕಲೇಟಿನ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರು. 21 ಕೋಟಿ ವಿನಿಯೋಗಿಸಿ ಹೊಸ ಉತ್ಪಾದನಾ ಯಂತ್ರವನ್ನು ಸ್ಥಾಪಿಸಿದ್ದು, ಚಾಕಲೇಟ್ ಉತ್ಪಾದನೆ ಪ್ರಾರಂಭವಾಗಿದೆ. ಆಫ್ರಿಕಾ ಖಂಡದ ದೇಶಗಳಾದ ಬೆನಿನ್, ಕ್ಯಾಮೆರಾನ್, ಗಾಂಬಿಯಾ, ಗಿನಿಯಾ, ಲಿಬೆನಾ ಮತ್ತು ಟೋಗೋಗೆ ಪ್ರತಿ ತಿಂಗಳು ಇಲ್ಲಿಂದ ಚಾಕಲೇಟ್ ಪಾನೀಯ ಗಣನೀಯ ಪ್ರಮಾಣದಲ್ಲಿ ರಫ್ತಾಗುತ್ತಿದೆ ಎಂದರು.
18ರಂದು ಮಹಾಸಭೆ: ಕ್ಯಾಂಪ್ಕೋ ಸಂಸ್ಥೆಯ ಮಹಾಸಭೆ ಸೆ.18ರಂದು ಮಂಗಳೂರು ಪುರಭವನದಲ್ಲಿ ಬೆ.10ಕ್ಕೆ ನಡೆಯಲಿದೆ ಎಂದರು.
ಉಪಾಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಇದ್ದರು.