ಕೊಳೆ ರೋಗದಿಂದ ಅಡಕೆ ಮರ ಉಳಿಸಿಕೊಳ್ಳಲು ಇಲಾಖೆ ಸಲಹೆ
ಮಂಗಳೂರು: ಅಡಕೆ ಮರದ ಕೆಳಗೆ ಬಿದ್ದಿರುವ ರೋಗ ಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರುಗಳನ್ನು ಆರಿಸಿ ತೆಗೆದು ಸುಟ್ಟು ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚುವ ಕೆಲಸ ಮಾಡುವುದರಿಂದ ಕೊಳೆರೋಗದಿಂದ ಮರ ಸಾಯದಂತೆ ತಡೆಗಟ್ಟಲು ಸಾಧ್ಯ ಎಂದು ರೈತರಿಗೆ ತೋಟಗಾರಿಕೆ ಇಲಾಖೆ ತಿಳಿಸಿದೆ.
ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಸ್ವಚ್ಛ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಅಡಕೆ ಕೊಯ್ಲಿನ ಸಮಯದಲ್ಲಿ ಒಣಗಿದ ಹಿಂಗಾರವನ್ನು ಕಡ್ಡಾಯವಾಗಿ ತೆಗೆದು ಶುಚಿಗೊಳಿಸಬೇಕು.
ಪ್ರಸ್ತುತ ಮಳೆಯಿಂದಾಗಿ ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶ ಮತ್ತು ಸೂರ್ಯನ ಬೆಳಕಿನ ಕೊರತೆ ಮುಂತಾದ ಹಲವು ಕಾರಣಗಳಿಂದ ದ.ಕ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕೊಳೆರೋಗ ಉಲ್ಬಣಗೊಂಡಿದೆ. ಕೊಳೆರೋಗದಿಂದ ಅಡಕೆಯಲ್ಲಿ ಎಳೆಕಾಯಿ ಉದುರುವಿಕೆ, ಬೆಳೆದ ಕಾಯಿಗಳಲ್ಲಿ ನೀರ್ಗುಳ್ಳೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಬಲಿತ ಕಾಯಿಗಳ ಮೇಲೆ ಬೂದುಗೊಳೆ ಬಂದು ಹಾನಿ ಹೆಚ್ಚಾಗುವ ಸಂಭವವಿದೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗೂ ಅಡಕೆ ಕಾಯಿ ಕೊಳೆಗೆ ಕಾರಣವಾಗುವ ಶಿಲೀಂದ್ರ ರೋಗಾಣುಗಳು ಅಭಿವೃದ್ಧಿ ಹೊಂದಿ ಶಿರಕೊಳೆ, ಸುಳಿಕೊಳೆ ಬಂದು ಅಡಿಕೆ ಮರಗಳು ಸಾಯುವ ಸಂಭವವಿರುತ್ತದೆ. ಅಲ್ಲದೆ ಈ ಅವಧಿಯಲ್ಲಿ ಹೆಚ್ಚಾಗುವ ಮಂಜಿನ ಹನಿಗಳು ರೋಗಾಣುಗಳ ಅಭಿವೃದ್ಧಿಗೆ ಅನುಕೂಲವಾಗಿರುತ್ತದೆ. ಅಡಕೆ ಕಾಯಿ ಕೊಳೆಗೆ ಕಾರಣವಾದ ಶಿಲೀಂದ್ರ ರೋಗಾಣುಗಳು ಸೋಗೆಗಳ ಬುಡಗಳನ್ನು ಕೊಳೆಸುವುದರಿಂದ ಮರ ಸಾಯತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.