ಕೌಟುಂಬಿಕ ಚೌತಿ, ಊರಿಗೆ ಕೀರುತಿ
ವಿಶೇಷ ವರದಿ
ಉಡುಪಿ: ಇಲ್ಲಿನ ಕಿದಿಯೂರು ಗ್ರಾಮದ ಭಂಡಾರ್ಕಾರ್ ಕುಟುಂಬದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಣೆಗೆ ಸಡಗರದ ಸಿದ್ಧತೆಗಳು ನಡೆಯುತ್ತಿವೆ. ಇದು ಎಲ್ಲರ ಮನೆಯಲ್ಲಿಯೂ ನಡೆಯುವ ಗಣೇಶೋತ್ಸವ ಆಚರಣೆಯಂತಲ್ಲ, ಬಹುಶಃ ಇದು ನಾಡಿನ ಅತ್ಯಂತ ಪ್ರಾಚೀನ ಮನೆಯೊಂದರಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಭಂಡಾರ್ಕಾರ್ ಕುಟುಂಬದಲ್ಲಿ ನಡೆಯುವ ಗಣೇಶೋತ್ಸವಕ್ಕೆ 6 ತಲೆಮಾರುಗಳ ಅಂದರೆ ಸುಮಾರು 300 ವರ್ಷಗಳ ಇತಿಹಾಸ ಇದೆ. ಇತರ ಸಾರ್ವಜನಿಕ ಗಣೇಶೋತ್ಸವಗಳಂತೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದೇ ನಡೆಯುವ ಇದೊಂದು ಕೌಟುಂಬಿಕ ಆಚರಣೆಯಾದರೂ ಊರಿನ ಎಲ್ಲ ಜನರು ಭಾಗವಹಿಸಿ, ಇದೊಂದು ಸಾರ್ವಜನಿಕ ಹಬ್ಬವಾಗಿ ಮಾರ್ಪಟ್ಟಿದೆ.
ಈ ಆಚರಣೆಯನ್ನು ದಿ. ಸುಬ್ರಾಯ ಭಂಡಾರ್ಕಾರ್ ಆರಂಭಿಸಿದ್ದರು. ಅವರ ನಂತರ ಮುಂದಿನ ತಲೆಮಾರುಗಳ ಯಜಮಾನರಾದ ದಿ. ವೆಂಕಟೇಶ ಭಂಡಾರ್ಕಾರ್, ದಿ. ಗೋವಿಂದ ಭಂಡಾರ್ಕಾರ್ ಅವರು ನಡೆಸಿಕೊಂಡು ಬಂದರು. ಪ್ರಸ್ತುತ ಈ ಕುಟುಂಬದ ಯಜಮಾನ 85ರ ಹರೆಯದ ಗೋಪಾಲಕೃಷ್ಣ ಭಂಡಾರ್ಕಾರ್ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ವಿಶೇಷ ಆಸ್ಥೆಯಿಂದ ಆಚರಿಸುತಿದ್ದಾರೆ.
1995ರಲ್ಲಿ ಟ್ರಸ್ಟ್ ಸ್ಥಾಪನೆ: ಊರ ಪರವೂರಿನಲ್ಲಿರುವ ಈ ಕುಟುಂಬದ ಸುಮಾರು 250 ಸದಸ್ಯರೆಲ್ಲರೂ ಗಣೇಶೋತ್ಸವದ ಸಂದರ್ಭದಲ್ಲಿ ಮನೆಯಲ್ಲಿ ಸೇರುತ್ತಾರೆ. ಆಗ ಈ ಕುಟುಂಬವೇ ಒಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯಂತಿರುತ್ತದೆ. ಈ ಗಣೇಶೋತ್ಸವ ಯಾವತ್ತೂ ನಿಲ್ಲಬಾರದು ಎಂಬ ಕಾರಣಕ್ಕೆ 1995ರಲ್ಲಿ ಭಂಡಾರ್ಕಾರ್ ಫ್ಯಾಮಿಲಿ ಟ್ರಸ್ಟ್ ರಚನೆ ಮಾಡಲಾಗಿದೆ. ಗಣೇಶೋತ್ಸವ ನಡೆಸುವುದಕ್ಕಾಗಿಯೇ 200 ಜನರು ಕುಳಿತುಕೊಳ್ಳಬಹುದಾದ ಸಭಾಭವನವನ್ನು ಕಟ್ಟಿದ್ದಾರೆ. ಇನ್ನೊಂದು ವಿಶೇಷ ಎಂದರೆ ಇಲ್ಲಿ ಪೂಜಿಸಲಾಗುವ 5 ಅಡಿ ಎತ್ತರದ ಆವೆ ಮಣ್ಣಿನ ಗಣೇಶನ ವಿಗ್ರಹವನ್ನು ಕುಟುಂಬದ ಸದಸ್ಯರೇ ಸೇರಿ ರಚಿಸುತ್ತಾರೆ. ಈ ಗಣಪನಿಗೆ ಕುಟುಂಬದ ಸದಸ್ಯರೆಲ್ಲರೂ ಹರಕೆಯ ರೂಪದಲ್ಲಿ ಸಮರ್ಪಿಸಿದ ಬೆಳ್ಳಿ, ಚಿನ್ನದ ಆಭರಣಗಳ ಮೌಲ್ಯವೇ ಲಕ್ಷ ರು.ಗೂ ಮೀರುತ್ತದೆ.
ಅಸಂಖ್ಯಾತ ಭಕ್ತರು: ಹಿಂದೆ ಒಂದೇ ದಿನ ಗಣೇಶೋತ್ಸವ ನಡೆಯುತ್ತಿತ್ತು, ಆದರೆ ಇದೀಗ ಸ್ವಲ್ಪ ವೈಭವಯತವಾಗಿ ಊರಿನ ಜನರ ಪೂಜೆ, ಹರಕೆಗಳಿಗಾಗಿ 5 ದಿನಗಳ ಆಚರಿಸಲಾಗುತ್ತದೆ. ಮಾಜಿ ಸಚಿವ ದಿ. ಡಾ. ವಿ. ಎಸ್. ಆಚಾರ್ಯ ಅವರ ಕುಟುಂಬ ಈ ಗಣೇಶೋತ್ಸವದ ದೊಡ್ಡ ಭಕ್ತರಾಗಿದ್ದರು. ಮಾಜಿ ಶಾಸಕ ಕೆ. ರಘುಪತಿ ಭಟ್, ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಮುಂತಾದವರು ಕೂಡ ಇಲ್ಲಿ ಪೂಜೆ ಸಲ್ಲಿಸುವ ಗಣ್ಯರಲ್ಲಿ ಸೇರಿದ್ದಾರೆ.
ಗಣೇಶೋತ್ಸವದ ಹಿಂದಿನ ದಿನ ಈ ಕುಟುಂಬದ 25- 30 ಮಹಿಳೆಯರು ಸೇರಿ ಗೌರಿ ಪೂಜೆಯನ್ನೂ ನಡೆಸುತ್ತಾರೆ. 5 ದಿನಗಳ ಗಣೇಶೋತ್ಸವದ ನಂತರ ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಕ್ತಾಭಿಮಾನಿಗಳ ಭಕ್ತಿ ಪರಕಾಷ್ಠೆಯ ಮೆರವಣಿಗೆಯಲ್ಲಿ ಮನೆಯ ಸಮೀಪದ ಪುಷ್ಕರಣಿಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ.