ಫಿಸಿಯೋಥೆರಪಿಸ್ಟ್ ಕೌನ್ಸಿಲ್ ಸ್ಥಾಪನೆ: ಸಚಿವ ಖಾದರ್
ಮಂಗಳೂರು: ರಾಜ್ಯದಲ್ಲಿ ಫಿಸಿಯೋಥೆರಪಿಸ್ಟ್ ಕೌನ್ಸಿಲ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದ ಡಾ.ಎಂ.ವಿ.ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನಲ್ಲಿ ಭಾನುವಾರ ವಿಶ್ವ ಫಿಸಿಯೋಥೆರಪಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ಫಿಸಿಯೋಥೆರಪಿ ಪದವಿ ಹಾಗೂ ಸ್ನಾತಕ ಪದವೀಧರರಿಗೆ ಸರ್ಕಾರಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಫಿಸಿಯೋಥೆರಪಿ ವಿಭಾಗಗಳಿಗೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಡಾ.ರಾಮಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ, ಟ್ರಸ್ಟಿಗಳಾದ ಡಾ.ದಿವ್ಯಾಂಜಲಿ ಶೆಟ್ಟಿ, ಡಾ.ರೊಹೇಲಾ ಶೆಟ್ಟಿ, ಪ್ರಾಂಶುಪಾಲ ಪ್ರೊ.ಗ್ಲಾಡ್ಸನ್ ಗೋಸ್ ಇದ್ದರು. ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬಿಒಎಸ್ ಅಧ್ಯಕ್ಷ ಡಾ.ಪ್ರದೀಪ್ ಶಂಕರ್, ಬೆಂಗಳೂರು ನಿಮ್ಹಾನ್ಸ್ ಕ್ಲಿನಿಕಲ್ ಸೈಕೋಥೆರಪಿಸ್ಟ್ ಡಾ.ಕಾರ್ತಿಕೇಯನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.