ಸುದ್ದಿ ಸಂಕ್ಷೇಪ
ಬಿ. ಸದಾಶಿವ ಪ್ರಭು ಅಧಿಕಾರ ಸ್ವೀಕಾರ
ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಉಪವಿಭಾಗದ ಸಹಾಯಕ ಆಯುಕ್ತ ಬಿ. ಸದಾಶಿವ ಪ್ರಭು ಅವರು ಕೆಎಸ್ಐ ಹಿರಿಯ ಶ್ರೇಣಿಗೆ ಪದನ್ನೋತಿ ಹೊಂದಿ ಪ್ರಧಾನ ವ್ಯವಸ್ಥಾಪಕರಾಗಿ(ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ) ಆ. 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜೀವನ್ ರಾಂ ನಿರ್ದೇಶನದ ಏಕದಶಾನನ ನಾಟಕ ಆಯ್ಕೆ
ಸುಳ್ಯ: ಖ್ಯಾತ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ಏಕದಶಾನನ ನಾಟಕ ದಕ್ಷಿಣ ವಲಯ ಯುವ ಜನ ಸಾಂಸ್ಕೃತಿಕ ಹಬ್ಬಕ್ಕೆ ಆಯ್ಕೆಗೊಂಡಿದೆ. ಮಂಗಳೂರು ವಿವಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಹಬ್ಬದ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಸ್ಥಾನ ಪಡೆದು ಅಕ್ಟೋಬರ್ನಲ್ಲಿ ಕೊಟ್ಟಾಯಂನಲ್ಲಿ ನಡೆಯುವ ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಗೊಂಡಿದೆ. ಜೀವನ್ ರಾಂ ನಿರ್ದೇಶನದ ನಾಟಕ ಸತತ ಎಂಟನೇ ಬಾರಿ ದಕ್ಷಿಣ ವಲಯಕ್ಕೆ ಆಯ್ಕೆಗೊಂಡಿದ್ದು, 3 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಜೀವನ್ ರಾಂ ನಿರ್ದೇಶನದ ಕಿರು ಪ್ರಹಸನ ಕೂಡ ದಕ್ಷಿಣ ವಲಯಕ್ಕೆ ಆಯ್ಕೆಗೊಂಡಿದೆ.
ತುಂತುರು ಮಳೆ
ಉಡುಪಿ: ಕಳೆದ 2 ದಿನಗಳಿಂದ ಉಡುಪಿಯಲ್ಲಿ ರಾತ್ರಿ ಹೊತ್ತು ತುಂತುರು ಮಳೆ ಬೀಳುತ್ತಿದೆ. ಭಾನುವಾರ ಬೆಳಗ್ಗೆ ಹನಿಹನಿ ಮಳೆಯಾಗಿದ್ದು ನಂತರದಲ್ಲಿ ಬಿಸಿಲಿನ ವಾತವರಣವಿತ್ತು. ಸಂಜೆ ಮೋಡ ಕವಿದ ವಾತವರಣವಿತ್ತು. ಭಾನುವಾರ ಮುಂಜಾನೆವರೆಗೂ ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 26.6 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 5.6 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 9.2 ಮಿ.ಮೀ. ಮಳೆಯಾಗಿವೆ.
ಹಟ್ಟಿಯಿಂದ ಹಸು ಕದ್ದು ಕೊಂದರು!
ಮಂಗಳೂರು: ಮನೆಯಲ್ಲಿ ಕಟ್ಟಿಹಾಕಿದ ದನವನ್ನು ಕಳವುಮಾಡಿ ಕಡಿದುಹಾಕಲಾಗಿದೆ ಎಂದು ಸೂರಲ್ಪಾಡಿ ನಿವಾಸಿ ಚಂದ್ರಶೇಖರ್ ಎಂಬವರು 7 ಮಂದಿ ವಿರುದ್ಧ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ರಾತ್ರಿ ಮನೆಯ ಹಟ್ಟಿಯಿಂದ ಎರಡೂವರೆ ವರ್ಷದ ದನವನ್ನು ಕದ್ದೊಯ್ದು ಆರೋಪಿ ಶರೀಫ್ ಎಂಬಾತನ ಮನೆ ವಠಾರದಲ್ಲಿ ಅದನ್ನು ಕಡಿದು ಹಾಕಲಾಗಿದೆ. ಕಳವಾದ ಹಸುವಿನ ಮೌಲ್ಯ ರು. 24 ಸಾವಿರ. ತಾನು ಮರುದಿನ ಬೆಳಗ್ಗೆ ದನವನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಹಸುವಿನ ಚರ್ಮ, ಗೊರಸು, ಕೊಂಬು ನೋಡಿ ಅದು ತನ್ನದೇ ಹಸು ಎಂದು ಗುರ್ತಿಸಿದ್ದೇನೆ. ಹಸುವನ್ನು ಕಡಿದು ಮಾಂಸ ಮಾಡಿದ್ದಾರೆ ಎಂದು ಆರೋಪಿ ಇಲ್ಯಾಸ್, ಮಹಮ್ಮದ್ ಇಸಾಕ್, ಶರೀಫ್, ನೂರುದ್ದೀನ್, ಅಬ್ಬಾಸ್, ಅಜೀರ್ ವಿರುದ್ಧ ದೂರು ನೀಡಿದ್ದಾರೆ. ಈ ಪೈಕಿ ಆರೋಪಿ ಮಹಮ್ಮದ್ನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಸಾಗಾಟ ಪತ್ತೆ
ಮಂಗಳೂರು: ಮಂಜನಾಡಿಯ ನಾಟೆಕಲ್ ಕ್ರಾಸ್ನಲ್ಲಿ ಬೊಲೆರೊ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಕೊಣಾಜೆ ಪೊಲೀಸರು ಶನಿವಾರ ಪತ್ತೆಹಚ್ಚಿದ್ದಾರೆ. ಎಸ್ಐ ವಾಹನ ತಪಾಸಣೆ ನಡೆಸುತ್ತಿದ್ದಾಗ ನಿಲ್ಲಿಸದೆ ಪರಾರಿಗೆ ಯತ್ನಿಸಿದ ಬೊಲೆರೊವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ 6 ದನ ಮತ್ತು 7 ಕರು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿತ್ತು. ಇವನ್ನು ವಶಪಡಿಸಿದ ಪೊಲೀಸರು ಫಜೀರಿನ ಗೋವನಿತಾಶ್ರಮಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ವಾಹನ ಚಾಲಕ ಆರೋಪಿ ಆಸಿಫ್ ಪರಾರಿಯಾಗಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಮೂಡುಪೆರಾರಿನ ಗಂಜಿಮಠ ನಿವಾಸಿ, ವಿವಾಹಿತ ಲಿಂಗಪ್ಪ(35) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ವರದಿಯಾಗಿದೆ. ವಿಪರೀತ ಪಾನಮತ್ತನಾದ ಈತ ಮಾನಸಿಕ ಸ್ಥಿಮಿತ ಕಳಕೊಂಡಿದ್ದ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಬಜ್ಪೆ ಪೊಲೀಸರಿಗೆ ದೂರು ನೀಡಲಾಗಿದೆ.
ಸರಕು ಸಮೇತ ಲಾರಿ ನಾಪತ್ತೆ ದೂರು
ಮಂಗಳೂರು: ಗುಜರಾತ್ಗೆ ಅಡಕೆ ಮೂಟೆ ಸಾಗಿಸುತ್ತಿದ್ದ ಲಾರಿ ಮ್ಹಾಲಿನ ಸಮೇತ ನಾಪತ್ತೆಯಾದ ಬಗ್ಗೆ ರಘುರಾಮ ಎಂಬವರು ಬಂದರು ಪೊಲೀಸರಿಗೆ ದೂರು ನೀಡಿದ ಬಗ್ಗೆ ವರದಿಯಾಗಿದೆ. ಮಂಗಳೂರಿನಿಂದ ರು. 39 ಲಕ್ಷ ಮೌಲ್ಯದ 252 ಬ್ಯಾಗ್ಗಳಲ್ಲಿ 16 ಟನ್ ಅಡಕೆ ಮೂಟೆ ಹೊಂದಿದ್ದ ಲಾರಿ ಸೆ.2ರಂದು ಗುಜರಾತ್ನ ಅಹಮದಾಬಾದ್ಗೆ ಹೊರಟಿತ್ತು. ಅಲ್ಲಿಗೆ ಸೆ.4ರಂದು ತಲುಪಬೇಕಿತ್ತು. ಆದರೆ ಸೆ.7ರ ವರೆಗೆ ತಲುಪಿಲ್ಲ. ಲಾರಿ ಚಾಲಕನ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಿಪ್ಪರ್ ಕಳವು: ನ್ಯಾಯಾಂಗ ಬಂಧನ
ಮೂಲ್ಕಿ: ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಕಳವು ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಲಯ ಸೆ.20ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರಿನ ನಂದಿಗುಡ್ಡೆ ನಿವಾಸಿ ಮೆಲ್ವಿನ್ ಡಿಸೋಜ ಎಂಬವರ ಟಿಪ್ಪರ್ ಲಾರಿಯನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ್ಕಿಯ ಕೆ.ಎಸ್.ರಾವ್ ನಗರ ನಿವಾಸಿಗಳಾದ ಉಮ್ಮರ್ ಫಾರೂಕ್, ಮಹಮ್ಮದ್ ಝಹೀರ್ ಮತ್ತು ಪ್ರಸಾದ್ ಎಂಬವರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.20ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.