ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇತಿಹಾಸ ಅವಜ್ಞೆಯಿಂದ ಪರಂಪರೆಗೆ ಅಪಾಯ

Rashmi Kasaragodu
Updated On : 12 Sept 2013, 12:30 pm

ಮಂಗಳೂರು: ಪುರಾತನ ಇತಿಹಾಸ ಅವಜ್ಞೆಯಿಂದ ಪರಂಪರೆಗೆ ಅಪಾಯ ಬಂದೊದಗಿದೆ ಎಂದು ಮೂಡುಬಿದಿರೆ ಧವಳಾ ಕಾಲೇಜು ಸಹಪ್ರಾಧ್ಯಾಪಕ ಡಾ.ಪುಂಡಿಕೈ ಗಣಪಯ್ಯ ಭಟ್ ಹೇಳಿದ್ದಾರೆ.
ನಗರದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಿಜೈನ ಶ್ರೀಮಂತಿನಿಬಾಯಿ ಸ್ಮಾರಕ ಸರ್ಕಾರಿ ಮ್ಯೂಸಿಯಂನಲ್ಲಿ ಬುಧವಾರ ಏರ್ಪಡಿಸಿದ 'ಇತಿಹಾಸ ಪರಂಪರೆ ಉಳಿಸಿ' ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪರಂಪರೆ ರಕ್ಷಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ ನಮ್ಮ ಹೊಣೆಯೂ ಇದೆ ಎಂದ ಅವರು, ಸರ್ಕಾರದ ಕಾರ್ಯಕ್ಕೆ ನಾವು ಕೈಜೋಡಿಸಬೇಕು. ಪುರಾತತ್ವ ಇಲಾಖೆಯಡಿ ರಾಜ್ಯದಲ್ಲಿ 4 ಸಾವಿರ, ಕರಾವಳಿಯಲ್ಲಿ 1 ಸಾವಿರ ಪುರಾತನ ದೇವಸ್ಥಾನಗಳ ರಕ್ಷಣೆಯ ಜವಾಬ್ದಾರಿ ಇದೆ. ಸಹಸ್ರಾರು ಸ್ಮಾರಕಗಳಿದ್ದರೂ ಈವರೆಗೆ 22 ಸ್ಮಾರಕಗಳು ರಕ್ಷಣೆಯ ಪಟ್ಟಿಯಲ್ಲಿವೆ ಎಂದರು.
ನಾಶಕ್ಕೆ ನಾವೇ ಕಾರಣ: ದೇಶದಲ್ಲಿ ಸ್ಮಾರಕಗಳ ನಾಶವನ್ನು ಮುಸ್ಲಿಂ ಧಾಳಿಕೋರರು ಮಾಡಿದ್ದಾರೆ ಎಂದು ಇತಿಹಾಸದಲ್ಲಿ ಕೇಳುತ್ತೇವೆ. ಆದರೆ ಧಾಳಿಕೋರರು ನಾಶಮಾಡಿದ್ದಕ್ಕಿಂತ ಅಧಿಕ ಪ್ರಮಾಣದಲ್ಲಿ ನಾವೇ ಸ್ಮಾರಕ ನಾಶಮಾಡಿದ್ದೇವೆ. ರಾಜ್ಯದಲ್ಲಿ 30 ಸಾವಿರ ಶಾಸನಗಳನ್ನು ನಾಶ ಮಾಡಲಾಗಿದೆ. ಕರಾವಳಿಯಲ್ಲಿ 2 ಸಾವಿರಕ್ಕೂ ಅಧಿಕ ಶಾಸನ ಮಾಯವಾಗಿದೆ. ನಗರೀಕರಣವೂ ಇದಕ್ಕೆ ಕಾರಣವಾಗಿದ್ದು, ದೇವಸ್ಥಾನಗಳ ಪುರಾತನ ಪರಂಪರೆಯನ್ನು ನವೀಕರಣ ಹೆಸರಲ್ಲಿ ವಿರೂಪಗೊಳಿಸಲಾಗುತ್ತಿದೆ. ಪರಂಪರೆಗೆ ಧಕ್ಕೆಯಾಗದಂತೆ ನವೀಕರಣ ಮಾಡಬೇಕೇ ವಿನಃ ಬೇರೆ ರಾಜ್ಯದ ವಾಸ್ತುವಿನಂತೆ ಅಲ್ಲ ಎಂದರು.
ಮೂಡುಬಿದಿರೆ ಸ್ವಸ್ತಿ ಜೈನ ವಸತಿ ಶಾಲೆಯ ಸ್ಥಾಪಕ ಪ್ರೊ.ಅನಂತರಾಜ ಇಂದ್ರ, ಕಾಲೇಜು ಪ್ರಾಂಶುಪಾಲೆ ಡಾ.ತಾರಾ ರಾವ್, ಮ್ಯುಸಿಯಂ ಮೇಲ್ವಿಚಾರಕ ಶೀಜೋಶ್ವರ್ ಮತ್ತಿತರರಿದ್ದರು.
ಕಾಲೇಜಿನ ಅಂತಿಮ ಪದವಿಯ 60ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರು ಮ್ಯೂಸಿಯಂನಲ್ಲಿ ತಾಳೆಗರಿ ಗ್ರಂಥ, ಕಡತ, ಚಿನ್ನದ ನಾಣ್ಯ, ಕಂಚು, ತಾಮ್ರ ವಿಗ್ರಹ, ಆಯುಧ, ಮಾನವ ವಂಶ ಶಾಸ್ತ್ರ, ಘಂಟೆ, ಮರದ ಕೆತ್ತನೆಗಳು, ಗಾಂಧೀಜಿ ಐತಿಹಾಸಿಕ ಫೋಟೋಗಳು, ಪರಂಪರೆಯ ವಸ್ತುಗಳನ್ನು ವೀಕ್ಷಿಸಿ ತಿಳಿದುಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement