ಕಿಡ್ನಿ ವೈಫಲ್ಯ; ಸಹಾಯ ನಿರೀಕ್ಷೆಯಲ್ಲಿ ಯುವಕ
ಬೆಳ್ತಂಗಡಿ: ಮದ್ಗುಣಿ ಕುಮಟಾ ಮೂಲದ ಆಟೋ ಚಾಲಕ ರಾಜು ಮಾರು ಪಟಗಾರ (32) ಎಂಬವರ ಎರಡೂ ಕಿಡ್ನಿಗಳು ವೈಫಲ್ಯ ಹೊಂದಿರುವ ಪರಿಣಾಮ ಮಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದು, ದಾನಿಗಳಿಂದ ಸಹಾಯ ಕೋರಿದ್ದಾರೆ.
ಶ್ರಮಜೀವಿ, ದುಶ್ಚಟಗಳಿಂದ ದೂರ ಉಳಿದಿರುವ ರಾಜು ಮಾರು ಪಟಗಾರ ಕಳೆದ ಏಳು ವರ್ಷಗಳಿಂದ ರಿಕ್ಷಾ ಚಾಲಕನಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆದರ್ಶ ಮಗನಾಗಿದ್ದ ರಾಜುಗೆ ವಿಧಿ ಮುಳ್ಳಾಗಿ ಕಾಡಿತು. ಇದೀಗ, ಎರಡೂ ಕಿಡ್ನಿಗಳು ವೈಫಲ್ಯ ಹೊಂದಿ ಅಸಹಾಯಕರಾಗಿದ್ದಾರೆ.
ತಾಯಿಯಿಂದ ಸಹಾಯ: ಮಗನ ಸ್ಥಿತಿಯನ್ನು ಕಂಡು ಮರುಗಿದ ಅಮ್ಮ, ಸ್ವತಃ ಒಂದು ಕಿಡ್ನಿ ನೀಡಲು ಮುಂದಾಗಿದ್ದಾರೆ. ತಾಯಿಯ ಕಿಡ್ನಿ ಮಗನಿಗೆ ಹೊಂದಿಕೆಯಾಗಲಿದೆ ಎಂದು ವೈದ್ಯರೂ ಹೇಳಿದ್ದಾರೆ. ಕಿಡ್ನಿ ವರ್ಗಾವಣೆ ಮತ್ತು ತದನಂತರ ಚಿಕಿತ್ಸೆಗಾಗಿ ಸುಮಾರು ರು. 6-7 ಲಕ್ಷ ತಗುಲಬಹುದು ಎಂದು ಮಂಗಳೂರಿನ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದರೆ ಇಷ್ಟೊಂದು ಮೊತ್ತ ಭರಿಸುವ ಶಕ್ತಿ ಈ ಕುಟುಂಬಕ್ಕಿಲ್ಲ.
ದಾನಿಗಳು ಬೇಕಾಗಿದ್ದಾರೆ: ಈ ಯುವಕನ ಬಾಳಿಗೆ ಬೆಳಕು ನೀಡಬೇಕಿದ್ದು, ಆರ್ಥಿಕ ಸಹಾಯ ಅವಶ್ಯ. ದಾನಿಗಳು ಮಾಹಿತಿಗಾಗಿ ಮೊ. 9740347207, 9901630539 ಸಂಪರ್ಕಿಸಬಹುದು. ರಾಜು ಅವರ ವಿಜಯ ಬ್ಯಾಂಕ್ ಖಾತೆಗೆ ಹಣ ಹಾಕಬಹುದು. ಎಸ್ಬಿ ಖಾತೆ ಸಂಖ್ಯೆ- 113001010007532, ಐಎಫ್ಎಸ್ಸಿ ಕೋಡ್- ವಿಐಜೆಬಿ 0001130.