ಕೊಕ್ಕಡ: ಎಂಡೋಪೀಡಿತ ವ್ಯಕ್ತಿ ಸಾವು
ಉಪ್ಪಿನಂಗಡಿ: ಎಂಡೋಸಲ್ಫಾನ್ ಸಂತ್ರಸ್ತರಾಗಿದ್ದ ಕೊಕ್ಕಡ ಸಮೀಪದ ಕುಮಾರ ವೆಂಕಣ್ಣ (28) ಕ್ಯಾನ್ಸರ್ಗೆ ಮಂಗಳವಾರ ಬಲಿಯಾಗುವುದರೊಂದಿಗೆ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಸಾವಿನ ನರ್ತನ ಮುಂದುವರಿದಿದೆ. ಕೊಕ್ಕಡದ ಕಂಪಕೋಡಿ ಮನೆ ನಿವಾಸಿ ಮೋನಪ್ಪಗೌಡ ಎಂಬವರ ಮಗ ಕುಮಾರ ವೆಂಕಣ್ಣ ವಿವಾಹಿತನಾಗಿದ್ದು, ಎರಡೂವರೆ ವರ್ಷದ ಹೆಣ್ಣು ಮಗುವಿನ ತಂದೆ. ವರ್ಷದ ಹಿಂದೆ ಎಂಡೋ ವಿಷ ತನ್ನ ದೇಹದಲ್ಲಿ ಕ್ಯಾನ್ಸರ್ ರೂಪದಲ್ಲಿ ಅನಾವರಣಗೊಂಡಾಗ ಬಡತನದ ಬವಣೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಅಸಮರ್ಥರಾಗಿದ್ದರು. ಆದಾಗ್ಯೂ ಮಂಗಳೂರಿನ ಖಾಸಗಿ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಂತೆಯೇ ಮಂಗಳವಾರ ಮೃತಪಟ್ಟಿದ್ದಾರೆ.