ಮಾಣಿ ಮಠ: 15ರಂದು 'ಒಪ್ಪಣ್ಣ ಸಮಾವೇಶ'
ಪುತ್ತೂರು: ಯುವಕರು ಹಾಗೂ ಬಾಲಕರಿಗೆ ಉತ್ತಮ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನಿರ್ದೇಶನದಂತೆ ಮಾಣಿಮಠದಲ್ಲಿ ಸೆ.15ರಂದು 'ಒಪ್ಪಣ್ಣ ಸಮಾವೇಶ' ಏರ್ಪಡಿಸಲಾಗಿದೆ. ಅಂದು ಮುಂಜಾನೆಯಿಂದ ಸಂಜೆ ತನಕ ನಡೆಯುವ ಈ ಸಮಾವೇಶದಲ್ಲಿ ರಾಘವೇಶ್ವರ ಶ್ರೀಗಳು ಪಾಲ್ಗೊಂಡು ಯುವ ಜನತೆಗೆ ಮಾರ್ಗದರ್ಶನ ನೀಡುವರು. ವಿವಿಧ ಗೋಷ್ಠಿಗಳು ನಡೆಯಲಿವೆ. ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀಗಳ ಜೊತೆ ತಮ್ಮ ಅನಿಸಿಕೆಗಳನ್ನು ಚರ್ಚೆ ಮಾಡಲು ಅವಕಾಶವಿದೆ. ಸಾತ್ವಿಕ ಮತ್ತು ಅರ್ಥಪೂರ್ಣ ಉತ್ತಮ ಜೀವನ, ಜೀವನದ ನಿರ್ದಿಷ್ಟ ಗುರಿಗಳನ್ನು ತಲುಪಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದು ಜಾಗತಿಕ ಹವ್ಯಕ ಮಹಾಮಂಡಲ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ ಮತ್ತು ಮಠದ ಮಹಾಮಂಡಲದ ವಿದ್ಯಾಶಾಖೆ ಪ್ರಧಾನ ಉಂಡೆಮನೆ ವಿಶ್ವೇಶ್ವರ ಭಟ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13ರಂದು ಖೋಖೋ ಟೂರ್ನಮೆಂಟ್
ಮೂಲ್ಕಿ: ಇಲ್ಲಿನ ಸಮೀಪದ ತೋಕೂರಿನ ತಪೋವನದ ಡಾ.ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಾಲೆಯ ಆಶ್ರಯದಲ್ಲಿ 13 ರಂದು ಶಾಲೆಯ ಕ್ರೀಡಾಂಗಣದಲ್ಲಿ ಎಐಸಿಎಸ್ ಶಾಲೆಗಳ ಅಂತರ್ ಶಾಲಾ ಖೋ ಖೋ ಟೂರ್ನಮೆಂಟ್- 2013 ಜರಗಲಿದೆ. ಬೆಳಗ್ಗೆ ಕ್ರೀಡಾಕೂಟವನ್ನು ನಿಟ್ಟೆ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಭುವನಾಜ್ಯೋತಿ ರೆಸಿಡೆನ್ಸ್ ಶಾಲೆಯ ಪ್ರಾಚಾರ್ಯ ಪ್ರಶಾಂತ್ ಡಿ' ಸೋಜ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.