ಹಿಂದಿ ಭಾಷೆಯಿಂದ ದೇಶದ ಹಿರಿಮೆ ಹೆಚ್ಚಿದೆ: ಅಮರ್ಲಾಲ್
ಮಂಗಳೂರು: 'ಸಾಂಸ್ಕೃತಿಕ ಹಿನ್ನಲೆಯಲ್ಲಿ ಹಿಂದಿ ಭಾಷೆ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದು, ಸಂಪರ್ಕ ಮಾಧ್ಯಮವಾಗಿ ಮಹತ್ವದ ಪಾತ್ರ ವಹಿಸಿದೆ' ಎಂದು ಕಾರ್ಪೊರೇಶನ್ ಬ್ಯಾಂಕ್ ಕಾರ್ಯಪಾಲಕ ನಿರ್ದೇಶಕ ಅಮರಲಾಲ್ ದೌಲತಾನಿ ಹೇಳಿದ್ದಾರೆ.
ನಗರ ಆಡಳಿತ ಭಾಷೆ ಅನುಷ್ಠಾನ ಸಮಿತಿ, ಆಕಾಶವಾಣಿ ಮಂಗಳೂರು, ಕಾರ್ಪೊರೇಶನ್ ಬ್ಯಾಂಕ್ ವತಿಯಿಂದ ಹಿಂದಿ ದಿವಸದ ಅಂಗವಾಗಿ ಬುಧವಾರ ಪುರಭವನದಲ್ಲಿ ನಡೆದ 'ಇಂದ್ರಧನುಷ್' ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿ ಭಾಷೆಯ ಪ್ರಸಾರಕ್ಕೆ ಆಕಾಶವಾಣಿ ಮಹತ್ತರ ಕೊಡುಗೆ ನೀಡಿದೆ. ಈ ಮೂಲಕ ಭಾಷೆಯ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸಿದೆ. ರಾಷ್ಟ್ರೀಯ ಭಾಷೆಯಾಗಿರುವ ಹಿಂದಿ ಭಾಷೆಯ ಮಹತ್ವವನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತಕುಮಾರ್ ಪೆರ್ಲ ಮಾತನಾಡಿ, ವಿಶಾಲ ಹಾಗೂ ಬಹು ಜನವರ್ಗಗಳ ಸಂಪರ್ಕವಾಗಿ ಹಿಂದಿ ಭಾಷೆ ಎಲ್ಲಡೆ ಪಸರಿಸಿದ ಕಾರಣ ರಾಷ್ಟ್ರೀಯ ಭಾಷೆಯಾಗಿ ಸ್ಥಾನ ಪಡೆದಿದೆ.
ಹಿಂದಿ ಭಾಷೆಯನ್ನು ಬೆಳೆಸುವ ಹಾಗೂ ಉಳಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಕಾರ್ಪೊರೇಶನ್ ಬ್ಯಾಂಕ್ ಮಹಾಪ್ರಬಂಧಕ ಪಿ.ಎಸ್. ಬಾಳಿಗಾ ಮತ್ತು ಸಂಗೀತ ಕಲಾವಿದ ಬಳ್ಳಾರಿ ಎಂ. ಅವರನ್ನು ಸನ್ಮಾನಿಸಲಾಯಿತು.
ನಗರ ಆಡಳಿತ ಭಾಷಾ ಅನುಷ್ಠಾನ ಸಮಿತಿ ವತಿಯಿಂದ ನಡೆದ ಸಮಾಚಾರ್ ವಾಚನ್, ಹಿಂದಿ ಶೃತಿಲಯ, ಚಿತ್ರಕಥಾ ಲೇಖನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ನಗರ ರಾಜಭಾಷೆ ಹಿಂದಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ಡಾ. ಜಯಂತಿ ಪ್ರಸಾದ್ ನೌಟಿಯಾಲ್, ಮಂಗಳೂರು ಆಕಾಶವಾಣಿ ಮುಖ್ಯಸ್ಥ ಜಿ. ರಮೇಶ್ ಚಂದ್ರನ್ ಹಾಜರಿದ್ದರು.