ಹೋಮ್ಗಾರ್ಡ್ ಕಮಾಂಡೆಂಟ್ ವಿರುದ್ಧ ಲೈಂಗಿಕ ಕಿರುಕುಳ ದೂರು
ಮಂಗಳೂರು: ಜಿಲ್ಲಾ ಹೋಮ್ಗಾರ್ಡ್ ಕಮಾಂಡೆಂಟ್ ಡಾ.ನಿದರ್ಶ್ ಹೆಗ್ಡೆ ವಿರುದ್ಧ ಲೈಂಗಿಕ ಕಿರುಕುಳ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗೃಹರಕ್ಷಕದಳದಲ್ಲಿ ಸೇವೆ ಮಾಡಿದ್ದ ಯುವತಿ (ಗೃಹರಕ್ಷಕಿ) ಬುಧವಾರ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ವಿವರ: 2001 ಗೃಹರಕ್ಷಕಿಯಾಗಿ ಸೇರಿದೆ. 2006ರಿಂದ ಮೇರಿ ಹಿಲ್ ಜಿಲ್ಲಾ ಗೃಹ ರಕ್ಷಕದ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. 2012 ಸೆಪ್ಟಂಬರ್ನಿಂದ 2013ರ ಮೇ ವರೆಗೆ ಮೇರಿಹಿಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಗಳಾದ ಗೃಹರಕ್ಷಕದಳ ಸಮಾಧೇಷ್ಟ ಡಾ.ಡಿ.ನಿದರ್ಶ್ ಹೆಗ್ಡೆ ಮತ್ತು ಉಪ ಸಮಾದೇಷ್ಟ ಪುರುಷೋತ್ತಮ ಅನುಚಿತವಾಗಿ ವರ್ತಿಸಿದ್ದಾರೆ.
ಅಶ್ಲೀಲವಾಗಿ ಮಾತನಾಡಿ, ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ವಿರೋಧಿಸಿದಾಗ ಕೆಲಸದಿಂದ ಕಿತ್ತು ಹಾಕಿದರು. ಇದನ್ನು ಪ್ರಶ್ನಿಸಿದಾಗ ಆರೋಪಿಗಳು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 504, 354 ಮತ್ತು ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.