ಇಂಟರ್ನೆಟ್ ಅಶ್ಲೀಲ ಕರೆ; ಪೊಲೀಸರಿಂದ ದೊಡ್ಡ ಬಲೆ
ಮಂಗಳೂರು: ವಿದೇಶದಿಂದ ಇಂಟರ್ನೆಟ್ ಮೂಲಕ ಮಾತನಾಡಿದರೆ ಅದರ ಮೂಲ ಹುಡುಕಲು ಹೋಗುವುದಿಲ್ಲ, ಸಾಧ್ಯವೂ ಇಲ್ಲ ಎಂಬುದು ಕ್ರಿಮಿನಲ್ಗಳಿಗೆ ದೊಡ್ಡ ಅಸ್ತ್ರ.
ಇದರ ಲಾಭ ಬಳಸಿ ಊರಲ್ಲಿದ್ದವರು ವಿದೇಶಕ್ಕೆ ತೆರಳಿ ಅಲ್ಲಿಂದಲೇ ಮಹಿಳೆಯರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುವ ಪ್ರಕರಣಗಳು ಜಿಲ್ಲೆಯಲ್ಲಿ ಇತ್ತೀಚೆಗೆ ತೀರಾ ಹೆಚ್ಚಿದ್ದವು. ಆದರೆ ಇನ್ನುಮುಂದೆ ಸಿಕ್ಕಿ ಬೀಳುವುದು ಖಚಿತ. ವಿದೇಶದಲ್ಲಿದ್ದು ಮಹಿಳೆಯರಿಗೆ ಅಶ್ಲೀಲ ಕರೆ ಮಾಡುತ್ತಿದ್ದವನನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಚಾಣಾಕ್ಷತನದಿಂದ ಬಂಧಿಸಿದ್ದಾರೆ.
ಊರಿಂದ ವಿದೇಶಕ್ಕೆ ಹೋಗುವವರು ಅಲ್ಲಿ ಸಿಮ್ ಖರೀದಿಸುತ್ತಾರೆ. ಸಾಫ್ಟ್ವೇರ್ಬಳಸಿ ಇಂಟರ್ನೆಟ್ ಮೂಲಕ ಊರಿನ ಗೆಳೆಯರಿಗೆ, ಮನೆಯವರಿಗೆ ಸರ್ವೇ ಸಾಧಾರಣವಾಗಿ ಕರೆ ಮಾಡುತ್ತಾರೆ. ಇದು ತೀರಾ ಅಗ್ಗ. ಆದರೆ ಇದರ ಜತೆಯಲ್ಲಿ ಕೆಲ ಪೋಲಿಗಳು, ವಿಘ್ನ ಸಂತೋಷಿಗಳು ಯುವತಿಯರನ್ನೇ ಗುರಿಯಾಗಿಸಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾರೆ.
ಮೊಬೈಲ್ಗಳಿಗೆ ಮಾತ್ರವಲ್ಲ ಸ್ಥಿರ ದೂರವಾಣಿಗೂ ಕರೆ ಮಾಡಿ ಮಾತನಾಡುತ್ತಾರೆ. ಕರೆ ಮಾಡುವಾಗ ಪುರುಷರು ಸಿಕ್ಕರೆ ಅಲ್ಲಿಗೆ ಕಟ್. ಮಹಿಳೆ ಧ್ವನಿ ಬಂದರೆ ಮಾತುಕತೆ ಆರಂಭ. ವಿದ್ಯಾರ್ಥಿನಿಯರದಾಗಿದ್ದರೆ ಬೆಂಬಿಡದೆ ಕರೆಗಳು ಬರುತ್ತವೆ. ಅಶ್ಲೀಲತೆ ಸಹಿಸದೆ ಕರೆ ಕಟ್ ಮಾಡಿದರೆ ಮತ್ತೆ ಮತ್ತೆ ಕರೆಗಳು ಬರುತ್ತಿದ್ದವು. ಕರೆ ಸ್ವೀಕರಿಸದೇ ಇದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕುತ್ತಿದ್ದರು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಕರೆಗಳು ಹೆಚ್ಚುತ್ತಿದ್ದವು. ರಾತ್ರಿ 10 ಗಂಟೆ ಬಳಿಕ, ಬೆಳಗ್ಗಿನ ಜಾವ ಅಶ್ಲೀಲ ಬೆದರಿಕೆ ಕರೆಗಳು ಬರುತ್ತಿದ್ದವು. ಕರೆ ಬಂದ ನಂಬರ್ಗೆ ವಾಪಸ್ ಡಯಲ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಖದೀಮರು ಸಿಕ್ಕಿ ಬೀಳುತ್ತಿರಲ್ಲಿಲ್ಲ. ವಿಕೃತ ಮಜಾ ಅನುಭವಿಸುತ್ತಿದ್ದರು.
ಇದಕ್ಕೆ ಒಂದು ಪರಿಹಾರ ಮಾಡಬೇಕು ಎಂದು ಎಸ್ಪಿ ಆಲೋಚನೆ ಮಾಡಿ ಬೆಳ್ತಂಗಡಿ ಪುಂಜಾಲಕಟ್ಟೆಯ ಕಾಲೇಜ್ ವಿದ್ಯಾರ್ಥಿನಿಯೊಬ್ಬಳಿಗೆ ಇಂಟರ್ನೆಟ್ ಮೂಲಕ ಅಶ್ಲೀಲ ಕರೆ ಮಾಡಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಪ್ರಕರಣವನ್ನು ಜಿಲ್ಲಾ ಅಪರಾಧ ಗುಪ್ತ ವಾರ್ತೆ ದಳಕ್ಕೆ ನೀಡಿದರು. ಜೂ.26ರಿಂದ ಕರೆ ಸತತವಾಗಿ ಬರುತ್ತಿತ್ತು. ಕರೆ ಬಂದ ವಿದೇಶಿ ಸಂಸ್ಥೆ ವಿವರ ಕಷ್ಟಪಟ್ಟು ಸಂಗ್ರಹಿಸಿದ ಡಿಸಿಐಬಿ ಪೊಲೀಸರು ಆ ಸಂಸ್ಥೆಯ ಭಾರತದಲ್ಲಿರುವ ಏಜೆನ್ಸಿಯನ್ನು ಪತ್ತೆ ಮಾಡಿದರು. ಏಜೆನ್ಸಿ ಮೂಲಕ ಕರೆ ಮಾಡಿದವರ ವಿವರ ನೀಡುವಂತೆ ವಿದೇಶಿ ಸಂಸ್ಥೆಗೆ ಕೇಳಿದರು. ಆದರೆ ಅವರು ಕ್ಯಾರೇ ಅನ್ನಲಿಲ್ಲ. ಕೊನೆಗೆ ಭಾರತದ ಏಜೆನ್ಸಿಗೆ ತೀವ್ರ ಒತ್ತಡ ಹಾಕಿದಾಗ ಕರೆ ಮಾಡಿದ ವ್ಯಕ್ತಿಯ ಕಾಲ್ ಡಿಟೈಲ್ಸ್ ನೀಡಿದರು.
ಆತ ಕರೆ ಮಾಡಿದ ಎಲ್ಲ ನಂಬರ್ಗಳ ಬೆನ್ನು ಹತ್ತಿದ ಪೊಲೀಸರಿಗೆ ಆತನ ಸಂಬಂಧಿಕರ ದೂರವಾಣಿ ಸಂಖ್ಯೆ ದೊರೆಯಿತು. ವಿಚಾರಣೆ ನಡೆಸಿದಾಗ ಆತ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ತೆರಳಿ 6 ವರ್ಷ ಆಗಿದೆ ಎನ್ನುವುದು ತಿಳಿಯಿತು. ಕೆಲ ದಿನಗಳ ಬಳಿಕ ಕಾಕತಾಳೀಯ ಎಂಬಂತೆ ಕರೆ ಮಾಡಿದ ವ್ಯಕ್ತಿ ಸ್ವದೇಶಕ್ಕೆ ಬಂದಿದ್ದ. ಡಿಸಿಐಬಿ ತಂಡ ಮತ್ತು ಪುಂಜಾಲಕಟ್ಟೆ ಪೊಲೀಸರು ಆರೋಪಿಯನ್ನು ಬಂಧಿಸಿದರು.
'ಈ ವ್ಯಕ್ತಿ ಸೌದಿ ಅರೇಬಿಯಾದಿಂದ ಇಂಟರ್ನೆಟ್ ಮೂಲಕ ಯುವತಿಗೆ ಕರೆ ಮಾಡಿ ಬೆದರಿಸುತ್ತಿದ್ದ. ಯುವತಿ ಡಿಫ್ರೆಶನ್ಗೆ ಹೋಗಿದ್ದರು. ಅವರ ಕಡೆಯಿಂದ ದೂರು ಬಂದಿತ್ತು. ಈ ಪ್ರಕರಣ ಅಷ್ಟೇನು ಗಂಭೀರವಲ್ಲದೇ ಇದ್ದರೂ ಇಂಟರ್ನೆಟ್ ಮೂಲಕ ಬೆದರಿಕೆ ಹಾಕುವ, ಮಹಿಳೆಯರ ಜತೆ ಅಶ್ಲೀಲವಾಗಿ ಮಾತನಾಡುವ ಅನೇಕ ಪ್ರಕರಣಗಳು ಗಮನಕ್ಕೆ ಬಂದಿತ್ತು. ವಿದೇಶದಿಂದ ಬರುವ ಇಂಟರ್ನೆಟ್ ಕರೆಗಳ ಮೂಲ ಪತ್ತೆ ಅಸಾಧ್ಯವಲ್ಲ. ಸಾಕಷ್ಟು ಪರಿಶ್ರಮ ಪಡಬೇಕು. ಈ ಪ್ರಕರಣದಲ್ಲಿ ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ. ಅನಾಮಧೇಯ ಕರೆ ಮಾಡುವವರಿಗೆ ಇದು ಎಚ್ಚರಿಕೆ' ಎಂದು ಎಸ್ಪಿ ಅಭಿಷೇಕ್ ಗೋಯಲ್ ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.