ಡೆಂಘೀಗೆ ಗೃಹಿಣಿ ಬಲಿ
ಅಫಜಲ್ಪುರ: ಜಿಲ್ಲೆಯಲ್ಲಿ ಮತ್ತೆ ಡೆಂಘೀ ಜ್ವರ ಪ್ರಕರಣ ಪತ್ತೆಯಾಗಿದೆ. ಅಫಜಲ್ಪುರ ತಾಲೂಕಿನ ಮಾತೋಳಿ ಗ್ರಾಮದ ಗೃಹಿಣಿ ಸಂಗೀತಾ ದೊಡ್ಡಪ್ಪ ಬಗಲಿ(30) ಬಲಿಯಾಗಿದ್ದಾರೆ. ಇವರು ಕಳೆದ 4 ದಿನದಿಂದ ಸೊಲ್ಲಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಮಾತೋಳಿಯಲ್ಲಿರುವ ಬಗಲಿ ಕುಟುಂಬದ ಮೂಲಗಳು ತಿಳಿಸಿವೆ. ಸೊಲ್ಲಾಪುರದಲ್ಲಿನ ವೈದ್ಯಕೀಯ ವರದಿಗಳಲ್ಲಿ ಮೃತ ಸಂಗೀತಾರನ್ನು ಕಾಡಿದ್ದು ಡೆಂಘೀ ಜ್ವರಬಾಧೆ ಎಂದೇ ಹೇಳಿವೆ. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಅಮರೇಶ ಕೊಳ್ಳೂರ ಮಾತೋಳಿಗೆ ಶುಕ್ರವಾರ ಭೇಟಿ ನೀಡಿದ್ದು ಮೃತರ ವೈದ್ಯಕೀಯ ವರದಿಗಳನ್ನೆಲ್ಲ ಕಲೆ ಹಾಕಿದ್ದಾರೆ. ಈ ವರದಿಗಳ ವಿಶ್ಲೇಷಣೆ ಮಾಡಲಾಗುತ್ತದೆ ಎಂದು ಡಾ. ಕೊಳ್ಳೂರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.