ದೌರ್ಜನ್ಯಕ್ಕೊಳಗಾದ ಬಾಲಕಿ ನಾಪತ್ತೆ
ಸುಳ್ಯ: ಬಸ್ ನಿರ್ವಾಹಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಬಾಲಕಿ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯ ಚೌಡಹಳ್ಳಿ ಗ್ರಾಮದ ಕಟ್ಟಾಯ ಹೊಸ ಮನೆಯ ಶಿವಣ್ಣ ಎಂಬವರ ಪುತ್ರ ನಾಗೇಶ್ ಸುಬ್ರಹ್ಮಣ್ಯ- ಕೊಲ್ಲಮೊಗ್ರ ಬಸ್‌ನಲ್ಲಿ ನಿರ್ವಾಹಕನಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ. ಈ ನಡುವೆ 17ರ ಹರೆಯದ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆದಿತ್ತು. ವಾರದ ಹಿಂದೆ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಬಾಲಕಿ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ತಿಳಿಸಿದ್ದಾರೆ.