ವರದಕ್ಷಿಣೆ ಕಿರುಕುಳ: ಮೂವರ ಬಂಧನ
ಸುಳ್ಯ: ವರದಕ್ಷಿಣೆ ಕಿರುಕುಳ ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನಂತೆ ಆಕೆಯ ಪತಿ, ಮಾವ ಹಾಗೂ ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕೂರು ಗ್ರಾಮದ ರವೀಂದ್ರ ಹಾಗೂ ಜಯಂತಿ ದಂಪತಿ ಪುತ್ರ ಪ್ರದೀಪನಿಗೆ 1 ವರ್ಷ 8 ತಿಂಗಳ ಹಿಂದೆ ಪುತ್ತೂರಿನ ಮೋಹಿನಿ(33) ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಮೋಹಿನಿ ಮನೆಯವರು 10 ಪವನ್ ಚಿನ್ನ ಹಾಗೂ 80 ಸಾವಿರ ನಗದನ್ನು ವರದಕ್ಷಿಣೆಯಾಗಿ ಪ್ರದೀಪನ ಮನೆಯವರಿಗೆ ನೀಡಿದ್ದರು. ಪ್ರದೀಪ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಬಂದಾಗ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಆಕೆಯ ಅತ್ತೆ ಮಾವ ಕೂಡಾ ಹೆಚ್ಚಿನ ವರದಕ್ಷಿಣೆ ನೀಡುವಂತೆ ಮೋಹಿನಿಗೆ ಕಿರುಕುಳ ನೀಡುತ್ತಿದ್ದರು. ವಾರದ ಹಿಂದೆ ಆಕೆಯ ಮೇಲೆ ಮೂವರು ಸೇರಿ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು, ತೀವ್ರ ಗಾಯಗೊಂಡ ಆಕೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಅಪ್ಪನಿಗೇ ಮದುವೆ ಮಾಡಿದ್ದ!: ಮೂರು ವರ್ಷದ ಹಿಂದೆ ಮಂಡೆಕೋಲು ಗ್ರಾಮದ ಪೇರಾಲು ಎಂಬಲ್ಲಿ ಜಮೀನು ಮಾಡಿದ್ದ ಪ್ರದೀಪ ವರದಕ್ಷಿಣೆ ಆಸೆಗಾಗಿ ತನ್ನ ತಾಯಿಯೊಂದಿಗೆ ಸೇರಿ ತಂದೆ ರವೀಂದ್ರನಿಗೆ ಪುತ್ತೂರಿನ ಕೊಣಾಜೆ ಎಂಬಲ್ಲಿನ ರಾಜೇಶ್ವರಿ ಎಂಬವರನ್ನು ವಂಚಿಸಿ ಮದುವೆ ಮಾಡಿಸಿದ್ದ. ಆ ಸಂದರ್ಭದಲ್ಲಿ ರವೀಂದ್ರ ಸಾಕಷ್ಟು ವರದಕ್ಷಿಣೆ ಪಡೆದಿದ್ದ. ಅಲ್ಲದೆ ರಾಜೇಶ್ವರಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಅಂದು ಮೂವರು ವಂಚಕರ ವಿರುದ್ಧ ರಾಜೇಶ್ವರಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳು ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ಆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.