ವಾಹನ ಪಲ್ಟಿ 8 ದನ, 2 ಕರು ಸಾವು
ಮಂಗಳೂರು: ಅಕ್ರಮ ಗೋಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ನಾಟೆಕಲ್ ತಿರುವು ಬಳಿ ಪಲ್ಟಿಯಾಗಿ 8 ದನ, 2 ಕರುಗಳು ದಾರುಣವಾಗಿ ಮೃತಪಟ್ಟಿವೆ. ವಾಹನದಲ್ಲಿ 18 ಗೋವುಗಳಿದ್ದವು. ಗುರುವಾರ ತಡರಾತ್ರಿ 2 ಗಂಟೆ ವೇಳೆಗೆ ವಾಹನ ಪಲ್ಟಿಯಾಗಿತ್ತು. ಇದೇ ದಾರಿಯಲ್ಲಿ ಸಾಗುತ್ತಿದ್ದ ಹಾಲು ವಿತರಕ ವಾಹನದ ಚಾಲಕ ಚೇತನ್ ಮತ್ತು ಸುನೀಲ್ ಪಲ್ಟಿಯಾದ ವಾಹನವನ್ನು ಹಗ್ಗದ ಸಹಾಯದಲ್ಲಿ ಮೇಲೆತ್ತಿ ಉಳಿದ ಗೋವುಗಳನ್ನು ರಕ್ಷಿಸಿದರು. ಪಿಕಪ್ ವಾಹನದ ಚಾಲಕ ಮತ್ತು ಅದರಲ್ಲಿದ್ದವರು ಅಪಘಾತ ನಡೆದ ತಕ್ಷಣ ಪರಾರಿಯಾಗಿದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗೋವುಗಳನ್ನು ಠಾಣೆಗೆ ತಂದು ಆರೈಕೆ ಮಾಡಿದ್ದಾರೆ. ಮುಡಿಪು, ಕುರ್ನಾಡು, ಸಜಿಪ ಪ್ರದೇಶಗಳಿಂದ ಗೋವುಗಳನ್ನು ಕದ್ದು ಚೆಂಬುಗುಡ್ಡೆ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.