ಪೆರ್ಣಂಕಿಲದಲ್ಲಿ ಚಿರತೆ ದಾಳಿ; ದನಕ್ಕೆ ಮಾರಣಾಂತಿಕ ಗಾಯ
ಉಡುಪಿ: ಶನಿವಾರ ಮತ್ತೆ ಜಿಲ್ಲೆಯಲ್ಲಿ ಚಿರತೆಯೊಂದು ಹಾಡಹಗಲೇ ಕಾಣಿಸಿಕೊಂಡು ದನದ ಮೇಲೆರಗಿ ತೀವ್ರವಾಗಿ ಗಾಯಗೊಳಿಸಿದ ಘಟನೆ ಜರುಗಿದೆ. ಉಡುಪಿ ತಾಲೂಕಿನ ಪೆರ್ಣಂಕಿಲ ಗ್ರಾಮದ ಬೆಲ್ಪತ್ರೆ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ರೈತ ಜಗದೀಶ ನಾಯಕ್ ಎಂಬವರು ದನವನ್ನು ಕಾಡಿನ ಪಕ್ಕದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಗೆ ಕಾಡಿನಲ್ಲಿದ್ದ ಮಂಗಗಳ ಗುಂಪು ಒಂದೇ ಸಮನೆ ಕೂಗತೊಡಗಿತು. ದನ ಕೂಡ ಹೆದರಿ ಕೂಗಿತು.
ತಕ್ಷಣ ಜಗದೀಶ ಅವರು ಹೋಗಿ ನೋಡಿದಾಗ ದನವನ್ನು ಚಿರತೆಯೊಂದು ಕಾಡಿನೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದು ಅದನ್ನು ನೋಡಿ ಜಗದೀಶ್ ಜೋರಾಗಿ ಬೊಬ್ಬೆ ಹಾಕಿದರು. ತಕ್ಷಣ ಚಿರತೆ ಕಾಡಿಗೆ ಓಡಿ ಹೋಗಿದೆ. ದನದ ಹಿಂಗಾಲುಗಳು ತೀವ್ರ ಜಖಂಗೊಂಡಿದ್ದು, ಮಾರಣಾಂತಿಕ ಗಾಯವಾಗಿದೆ. ಪರಿಸರದಲ್ಲಿ ಕಳೆದ ಹತ್ತು ವರ್ಷದಿಂದ ಚಿರತೆಯ ಉಪಟಳವಿದ್ದು, ಇಲ್ಲಿನ ಬಹುತೇಕ ಮನೆಗಳ ಸಾಕುನಾಯಿಗಳು ಚಿರತೆಗೆ ಬಲಿಯಾಗಿವೆ. ಹತ್ತಾರು ದನಗಳು ಚಿರತೆಗೆ ಬಲಿಯಾಗಿವೆ. ಆದರೂ ಆರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಬುಧವಾರ ಬ್ರಹ್ಮಾವರ ಸಮೀಪದ ಕಾಡೂರು ಎಂಬಲ್ಲಿ ಕರಿಚಿರತೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಅದನ್ನು ಹಿಡಿದು ಕುದ್ರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದರು.