21ರಂದು ಶಾಸಕ ಅಂಗಾರ ಮನೆಯಲ್ಲಿ ರಾಘವೇಶ್ವರ ಶ್ರೀ ಗುರುಪಾದುಕಾ ಪೂಜೆ
ಸುಳ್ಯ: ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ 21ರಂದು ಸುಳ್ಯ ಶಾಸಕ ಎಸ್.ಅಂಗಾರ ಮನೆಗೆ ಭೇಟಿ ನೀಡಲಿದ್ದಾರೆ.
ಈ ಕುರಿತು ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಎಸ್. ಅಂಗಾರ, ಅಮರಮುಡ್ನೂರು ಗ್ರಾಮದ ಕುಂಟಿಕಾನದಲ್ಲಿರುವ ಮನೆ 'ಕೌಸ್ತುಭ ಕುಟೀರ'ಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರಾಘವೇಶ್ವರ ಸ್ವಾಮೀಜಿಗೆ ಗುರುಪಾದುಕಾ ಪೂಜೆ ನಡೆಸಲಾಗುವುದು ಎಂದು ತಿಳಿಸಿದರು. 21ರಂದು ಅಪರಾಹ್ನ 2 ಗಂಟೆಗೆ ಆಗಮಿಸುವ ಸ್ವಾಮೀಜಿಯನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಗುವುದು. ಬಳಿಕ ಗುರುಪಾದುಕಾ ಪೂಜೆ ಮತ್ತು ಆಶೀರ್ವಚನ ಮತ್ತು ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ. ರಾಘವೇಶ್ವರ ಸ್ವಾಮೀಜಿ ಮಾಣಿ ಪೆರಾಜೆ ಮಠದಲ್ಲಿ ಚಾತುರ್ಮಾಸ್ಯ ವ್ರತ ಮುಗಿಸಿ ಸೀಮೋಲ್ಲಂಘನದ ನಂತರದ ಪಯಣದಲ್ಲಿ ಪ್ರಥಮ ಬಾರಿಗೆ ಇಲ್ಲಿಗೆ ಆಗಮಿಸಲಿದ್ದಾರೆ. ದುಡಿಯ ವಾದ್ಯ ಮೇಳಗಳೊಂದಿಗೆ ಅವರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಗುವುದು ಎಂದು ಅಂಗಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅಶೋಕ್ ಅಡ್ಕಾರ್, ಕುಶಾಲಪ್ಪ ಪೆರುವಾಜೆ ಇದ್ದರು.