ಎಟಿಎಂಗೆ ಕನ್ನ ಹಾಕಿ ಸಿಕ್ಕಿಬಿದ್ದ ಖದೀಮ
ಮಂಗಳೂರು: ಎಟಿಎಂಗೆ ಕನ್ನಹಾಕಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೊಣಾಜೆ ಸಮೀಪ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ. ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನ ಬಳಿಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಿಂದ ಹಣ ಎಗರಿಸಲು ಭಾನುವಾರ ನಸುಕಿನ 2.15ರ ವೇಳೆ ಕಪ್ಪು ಅಂಗಿ, ಪ್ಯಾಂಟ್ ಧರಿಸಿ ಮುಸುಕು ಹಾಕಿದ ವ್ಯಕ್ತಿಯೊಬ್ಬ ಎಟಿಎಂಗೆ ನುಗ್ಗಿದ್ದ. ಕೈಗೆ ಗ್ಲೌಸ್ ಹಾಕಿ ಕೈಯಲ್ಲಿ ಕಟ್ಟಿಂಗ್ ಮಿಷನ್ ಹಿಡಿದು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದ. ಅಷ್ಟರಲ್ಲಿ ರಸ್ತೆಯಲ್ಲಿ ಗಸ್ತುನಿರತ ಎಎಸ್ಐ ನಾಗಿಣಿ, ಸಿಬ್ಬಂದಿ ಇದನ್ನು ಗಮನಿಸಿ ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಿದಾಗ ಆತ ಕೋಟೆಕಾರು ನಿವಾಸಿ ಅರುಣ್ ಕುಮಾರ್ ಶೆಟ್ಟಿ ಎಂದು ಹೇಳಿದ್ದಾನೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.