ಕೇಂದ್ರ, ರಾಜ್ಯ ಅನೀತಿ ವಿರುದ್ಧ ಪಿಯುಸಿಎಲ್ ಸಹಿ ಸಂಗ್ರಹ
ಮಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೀತಿ ಕಾಯ್ದೆಗಳ ವಿರುದ್ಧ, ರಾಜದ್ರೋಹ ಕಾಯ್ದೆಗೆ ತಿದ್ದುಪಡಿ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಿಯುಸಿಎಲ್ (ನಾಗರಿಕ ಹಕ್ಕುಗಳಿಗಾಗಿ ಜನರ ಸಂಘಟನೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್ ಹೇಳಿದ್ದಾರೆ.
ಮಂಗಳೂರಿನಲ್ಲಿ 2 ದಿನಗಳ ಪಿಯುಸಿಎಲ್ ರಾಷ್ಟ್ರೀಯ ಕಾರ್ಯಾಗಾರ ಸಮಾರೋಪ ಬಳಿಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಮಾನವ ಹಕ್ಕುಗಳ ವಿರುದ್ಧ ದಬ್ಬಾಳಿಕೆ, ಆಹಾರ ಕಾಯ್ದೆ ಸಮಸ್ಯೆ ಸೇರಿದಂತೆ ಸರ್ಕಾರಗಳ ತಪ್ಪುಗಳ ವಿರುದ್ಧ ಪಿಯುಸಿಎಲ್ ಹಂತ ಹಂತವಾಗಿ ಹೋರಾಟ ಕೈಗೆತ್ತಿಕೊಳ್ಳಲಿದೆ. ಸಹಿ ಸಂಗ್ರಹ ಅಭಿಯಾನ ನಡೆಸಿ ಅದನ್ನು ಲೋಕಸಭೆಗೆ ಸಲ್ಲಿಸಲಾಗುವುದು ಎಂದರು. ಪ್ರಸ್ತುತ ಸರ್ಕಾರಗಳು ರೂಪಿಸುತ್ತಿರುವ ಕಾಯ್ದೆಗಳು ಬಡವ-ಶ್ರೀಮಂತರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಜಮೀನು ವಶಪಡಿಸಿಕೊಂಡು ಭಾರೀ ಕೈಗಾರಿಕೆಗಳಿಗೆ ನೀಡಿ ರೈತನ ಬದುಕಿಗೆ ಕೊಳ್ಳಿ ಇಡಲಾಗುತ್ತಿದೆ. ಇದರ ವಿರುದ್ಧ ಹೋರಾಡಿದರೆ ಪೊಲೀಸ್ ಬಲ ಬಳಸಿ ಹೋರಾಟವನ್ನು ಮಟ್ಟಹಾಕಲಾಗುತ್ತಿದೆ. ದೇಶದ ಎಲ್ಲ ಸಂಪತ್ತನ್ನೂ ಕೈಗಾರಿಕೋದ್ಯಮಿಗಳು, ಸರ್ಕಾರಗಳು ಲೂಟಿ ಮಾಡುತ್ತಿವೆ ಎಂದು ದೂರಿದರು.
ಕಾಯ್ದೆ ತಿದ್ದುಪಡಿಯಾಗಲಿ: ಭಾರತೀಯ ರಾಷ್ಟ್ರೀಯ ಚಳವಳಿ ಹತ್ತಿಕ್ಕಲು ಬ್ರಿಟಿಷರು ಜಾರಿಗೆ ತಂದ ರಾಜದ್ರೋಹ ಕಾಯ್ದೆ ಈಗಲೂ ಮುಂದುವರಿದಿರುವುದು ದುರದೃಷ್ಟಕರ. ಈ ಕಾಯ್ದೆಯ ದುರ್ಬಳಕೆ ಹೆಚ್ಚಾಗುತ್ತಿದ್ದು, ತಕ್ಷಣ ತಿದ್ದುಪಡಿಯಾಗಬೇಕು ಎಂದು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಡಾ.ಬಿನಾಯಕ್‌ಸೇನ್ ಆಗ್ರಹಿಸಿದರು. ಈ ಹಿಂದೆ ತನ್ನನ್ನು ಕೂಡ ರಾಜದ್ರೋಹ ಕಾಯ್ದೆಯಡಿ ಬಂಧಿಸಲಾಗಿತ್ತು. ನಿರಂತರ ಹೋರಾಟ ನಡೆಸಿದ್ದರಿಂದ ಜಾಮೀನು ಪಡೆದು ಹೊರಬರಲು ಸಾಧ್ಯವಾಯಿತು ಎಂದರು. ರಾಷ್ಟ್ರೀಯ ಅಧ್ಯಕ್ಷ ಪ್ರೊ.ಪ್ರಭಾಕರ ಸಿನ್ಹಾ, ಹೋರಾಟಗಾರ್ತಿ ಕವಿತಾ ಶ್ರೀವಾತ್ಸವ್, ಮುಖಂಡರಾದ ರವಿಕಿರಣ ಜೈನ್, ಪಿ.ಬಿ.ಡೇಸಾ ಇದ್ದರು.