ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲ್ಕಿ: ಮಿತಿಮೀರಿದ ಕಳ್ಳರ ಹಾವಳಿ

Lingaraj Badiger
Updated On : 16 Sept 2013, 11:41 am

ಮೂಲ್ಕಿ: ಇಲ್ಲಿನ ಕೆ.ಎಸ್. ರಾವ್ ನಗರದ ಎಂಸಿಎಫ್ ಕಾಲೋನಿಯಲ್ಲಿ ಚಿಲ್ಲರೆ ಕಳ್ಳರ ಹಾವಳಿ ಹೆಚ್ಚಿದ್ದು, ರಾತ್ರಿ ಹೊತ್ತಿನಲ್ಲಿ ಮನೆಯ ಹೊರಗಿಟ್ಟಿರುವ ಕೊಡಪಾನ, ತಾಮ್ರದ ಹಂಡೆ, ಕುಕ್ಕರ್ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳು ಕಳವಾಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುವ ಮೂಲಕ ಕಳ್ಳರ ಕಾಟವನ್ನು ತಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆ ಬದಿ ನಿಲ್ಲಿಸಿದ್ದ ಆಮ್ನಿ ಕಾರು ಕಳವು
ವಿಟ್ಲ: ಮಾಣಿ-ಮೈಸೂರು ಹೆದ್ದಾರಿಯ ಬದಿಯಲ್ಲಿರಿಸಿದ್ದ ಆಮ್ನಿ ಕಾರು ಭಾನುವಾರ ಕಳವಾಗಿದೆ. ಕನ್ಯಾನ ಗ್ರಾಮದ ಪಿಲಿಂಗುಳಿ ಗೋವಿಂದ ಭಟ್ ಅವರ ಪುತ್ರ ಸುಬ್ಬರಾಂ ಬೆಳಗ್ಗೆ 11.30ರ ವೇಳೆಗೆ ರಸ್ತೆ ಬದಿಯಲ್ಲಿ ಆಮ್ನಿ ಕಾರನ್ನು ನಿಲ್ಲಿಸಿ ಕಾರ್ಯಕ್ರಮಕ್ಕೆ ತೆರಳಿದ್ದರು. ಅವರು ಸಂಜೆ 5.30ಕ್ಕೆ ವಾಪಸಾಗುವ ಹೊತ್ತಿಗೆ ಕಾರು ನಾಪತ್ತೆಯಾಗಿತ್ತು. 13 ದಿನಗಳ ಹಿಂದಷ್ಟೇ ಅವರು ಮಡಿಕೇರಿಯಿಂದ ಈ ಆಮ್ನಿ ಕಾರು ಖರೀದಿಸಿದ್ದರು.
ಮಗಳೊಂದಿಗೆ ತಾಯಿ ದಿಢೀರ್ ಪರಾರಿ
ವಿಟ್ಲ: ಮನೆಯಲ್ಲಿ ಎಲ್ಲರೂ ಇರುವಾಗಲೇ ದಿಢೀರನೆ ಮಹಿಳೆಯೊಬ್ಬರು ತಮ್ಮ ಮಗಳ ಜತೆ ಕಾರಿನಲ್ಲಿ ಪರಾರಿಯಾದ ಘಟನೆ ಶನಿವಾರ ಸಂಜೆ ಇಡ್ಕಿದು ಗ್ರಾಮದಲ್ಲಿ ಸಂಭವಿಸಿದೆ. ವಿಟ್ಲ ಸಮೀಪದ ಇಡ್ಕಿದು ಗ್ರಾಮದ ಗೌರಿ ನಿವಾಸದ ನಿವಾಸಿ ಪ್ರಮೀಳಾ(27) ಹಾಗೂ ಆಕೆ ಮಗು ವೈಷ್ಣವಿ (4) ಎಂಬವರು ಮನೆಬಿಟ್ಟು ತೆರಳಿದವರು. ಈಕೆ ಮನೆಯಲ್ಲಿ ಎಲ್ಲರೂ ಇರುವಾಗಲೇ ದಿಢೀರನೆ ಮನೆ ಸಮೀಪದ ತೋಟದ ಬದಿಯಲ್ಲಿ ನಿಂತಿದ್ದ ಅಪರಿಚಿತನ ನೀಲಿ ಕಾರಿನಲ್ಲಿ ಬಟ್ಟೆ ಬರೆಗಳನ್ನು ತೆಗೆದುಕೊಂಡು ತೆರಳಿದ್ದಾರೆ ಎಂದು ಆಕೆ ಪತಿ ಕೃಷ್ಣಾನಂದ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ಇನ್ನೊಬ್ಬಳು ಪುತ್ರಿ ಶಾಲೆಗೆ ತೆರಳಿದ್ದು, ಶಾಲೆ ಬಿಟ್ಟು ಮನೆಗೆ ಬರುವಷ್ಟರಲ್ಲಿ ಇವರಿಬ್ಬರು ಮನೆಬಿಟ್ಟು ತೆರಳಿದ್ದಾಳೆ. ಕಳೆದ ಕೆಲವು ದಿನಗಳಿಂದ ಗಂಡ- ಹೆಂಡತಿ ಮಧ್ಯೆ ಜಗಳವಾಗುತ್ತಿದ್ದು, ವೈಮನಸ್ಸು ಉಂಟಾಗಿತ್ತು ಎಂದು ಹೇಳಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಪಂ ಸದಸ್ಯಗೆ ಕೊಲೆ ಬೆದರಿಕೆ ಕರೆ
ಬಂಟ್ವಾಳ: ಭೂಗತ ಪಾತಕಿಯೊಬ್ಬನ ಬಂಟನೆಂದು ಪರಿಚಯಿಸಿಕೊಂಡ ವ್ಯಕ್ತಿ ಗ್ರಾ.ಪಂ. ಸದಸ್ಯರೊಬ್ಬರಿಗೆ ದೂರವಾಣಿಯಲ್ಲಿ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ತಾಲೂಕಿನ ಮಂಚಿ- ಮೋಂತಿಮಾರು ನಿವಾಸಿ ಮಹಮ್ಮದ್ ಎಂಬವರ ಮಗ ಮಂಚಿ ಗ್ರಾಪಂ ಸದಸ್ಯ ಜಿ.ಎಂ. ಇಬ್ರಾಹಿಂ ಎಂಬವರಿಗೆ ಮೊಬೈಲ್ ಮೂಲಕ ಬೆದರಿಕೆ ಕರೆ ಬಂದಿದ್ದು, ತಾನು ಭೂಗತ ಪಾತಕಿ ಬಂಟ ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಯಾವುದೋ ರಾಜಿ ಪಂಚಾಯಿತಿಕೆ ಹೆಸರಿನಲ್ಲಿ ಇಬ್ರಾಹಿಂ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಇಬ್ರಾಹಿಂ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ರೈಲು ಡಿಕ್ಕಿ: ವ್ಯಕ್ತಿ ಮೃತ
ಕೋಟ: ಇಲ್ಲಿನ ಕೆದೂರು ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ಅಂಪಾರು ಗ್ರಾಮದ ಸುರೇಶ ಶೆಟ್ಟಿ (36). ಅವರು ಭಾನುವಾರ ಪೇಟೆಗೆಂದು ಹೋದವರು ಹತ್ತಿರ ದಾರಿಯಾದ ಕೆದೂರು ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ ನಡೆದುಕೊಂಡು ಹೋಗುವಾಗ ರೈಲು ಡಿಕ್ಕಿಯಾಯಿತು. ತೀವ್ರ ಗಾಯಗೊಂಡ ಸುರೇಶ್ ಶೆಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಂದೆ ಮಹಾಬಲ ಶೆಟ್ಟಿ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್- ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ
ಮಲ್ಪೆ: ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಮೂಡುತೋನ್ಸೆ ಗ್ರಾಮದ ನೇಜಾರು ಕೆ.ಕೆ. ಫಿಶ್ ನೆಟ್ ಫ್ಯಾಕ್ಟರಿ ಬಳಿ ಭಾನುವಾರ ನಡೆದಿದೆ. ಸನ್ಯಾಸಿ ಮಠ ನಿವಾಸಿ ಬೈಕ್ ಸವಾರ ಪ್ರಿಯಾಂಕ ಹಾಗೂ ಸಹಸವಾರ ಪ್ರಕಾಶ್ ಎಂದು ಗುರುತಿಸಲಾಗಿದೆ. ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳವು
ಗಂಗೊಳ್ಳಿ: ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಕೊಂಡು ಕಾರವಾರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಗಳಿಂದ ಡೀಸೆಲ್ ಕಳವು ಮಾಡಿದ ಪ್ರಕರಣ ಭಾನುವಾರ ಬೆಳಗ್ಗಿನ ಜಾವ ನಡೆದಿದೆ. ಚಾಲಕರಾದ ಅಬ್ಬಾಸ್ ಹಾಗೂ ಲಕ್ಷ್ಮಣ ಎಂಬವರು ತಮ್ಮ ಲಾರಿಗಳನ್ನು ರಾತ್ರಿ ಮರವಂತೆ ಸಮೀಪ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಕಳ್ಳರು ಡೀಸೆಲ್ ಟ್ಯಾಂಕ್‌ನ ಸ್ಕ್ರೂ ತೆಗೆದು ಪೈಪ್ ಇಳಿಸಿ ಸುಮಾರು 400 ಲೀ. ಡೀಸೆಲ್ ಕಳವು ಮಾಡಿದ್ದಾರೆ. ಪಕ್ಕದಲ್ಲಿದ್ದ ಇನ್ನೊಂದು ಲಾರಿಯಿಂದ 100 ಲೀ. ಡೀಸೆಲ್ ಕಳವು ಮಾಡಿರುವುದು ಪತ್ತೆಯಾಗಿದೆ. ಕಳ್ಳತನವಾದ ಡೀಸೆಲ್‌ನ ಒಟ್ಟು ಮೌಲ್ಯ ರು. 20 ಸಾವಿರ ಎಂಬುದಾಗಿ ಅಬ್ಬಾಸ್ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಪತ್ತೆಗೆ ಸಹಕಾರ ಶಂಕೆ; ಬಾರ್ ಮೇಲೆ ಗುಂಪು ದಾಳಿ
ಮಂಗಳೂರು: ನಾಪತ್ತೆಯಾದ ಆರೋಪಿಯೊಬ್ಬನ ಪತ್ತೆಗೆ ಸಹಕರಿಸಿದ ಸಂಶಯದ ಮೇರೆಗೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನಿಸಿ ಬಾರ್‌ನ ಕಿಟಿಕಿಗಳ ಗಾಜು ಪುಡಿ ಮಾಡಿದ ಘಟನೆ ನೀರುಮಾರ್ಗ ಬಳಿಯ ಬಿತ್ತುಪಾದೆ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ಶಂಕಿಸಿ ರಮಾನಾಥ್ ಎಂಬಾತನನ್ನು ಆರೋಪಿ ಪರ ಗುಂಪಿನವರು ಬೆನ್ನಟ್ಟಿದ್ದರು. ತನ್ನ ಮೇಲೆ ಹಲ್ಲೆ ನಡೆಸುತ್ತಾರೆಂದು ಹೆದರಿ ಬಾರ್‌ಗೆ ನುಗ್ಗಿದ್ದ ರಮಾನಾಥ್ ಅಲ್ಲಿಂದ ಹೊರಬಂದಿರಲಿಲ್ಲ.
ಇದರಿಂದ ರೊಚ್ಚಿಗೆದ್ದ ಹೊರಗೆ ಸೇರಿದ ಗುಂಪು ಬಾರ್‌ಗೆ ಕಲ್ಲು ತೂರಾಟ ನಡೆಸಿತು. ಘಟನೆಯಲ್ಲಿ ಬಾರ್‌ನ ಕಿಟಕಿ ಗಾಜುಗಳು ಹಾನಿಗೀಡಾಗಿದ್ದು, ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಸ್ಥತಿಯನ್ನು ಹತೋಟಿಗೆ ತಂದರು. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ರವೀಶ್ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಘಟನೆ ಬಗ್ಗೆ ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement