ಸಮರ್ಪಕ ಗ್ರಾಮಸಭೆಗೆ ಸೂಚನೆ
ಮಂಗಳೂರು: ಗ್ರಾಮ ಪಂಚಾಯ್ತಿಗಳು ಗ್ರಾಮ ಸಭೆಯನ್ನು ಸಮರ್ಪಕವಾಗಿ ನಡೆಸದೆ ಇರುವ ಕಾರಣ ಉದ್ಯೋಗ ಖಾತರಿ ಯೋಜನೆಯ ಕಾರ್ಯ ಸಾಧನೆಯಲ್ಲಿ ನಿರೀಕ್ಷಿತ ಮಟ್ಟ ಸಾಧಿಸದಿರುವುದು ಸ್ಪಷ್ಟವಾಗಿದೆ ಎಂದು ಜಿಲ್ಲಾ ಒಂಬುಡ್ಸ್ಮನ್ ಶೀನ ಶೆಟ್ಟಿ ಹೇಳಿದ್ದಾರೆ. ಈ ಕುರಿತು ಎಲ್ಲ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಗ್ರಾಮಸಭೆಯನ್ನು ಸರಿಯಾದ ಪ್ರಚಾರ, ಪೂರ್ವ ತಯಾರಿ, ಸಿದ್ಧತೆ ಇಲ್ಲದೆ ನಡೆಸುವುದರಿಂದ ಉದ್ಯೋಗ ಚೀಟಿ ಹೊಂದಿರುವ ಹೆಚ್ಚಿನ ಕುಟುಂಬಗಳು ಸಭೆಗೆ ಹಾಜರಾಗಿಲ್ಲ. ಇದರ ಪರಿಣಾಮ ಬೇಡಿಕೆಗಳ ಕ್ರಿಯಾಯೋಜನೆ ಆಗದಿರುವುದು ಕಂಡುಬರುತ್ತದೆ. ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆಯ ಪರಿಷ್ಕೃತ ಕಾರ್ಯಾಚರಣೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಕಾಮಗಾರಿ ನಿರ್ವಹಿಸುವಲ್ಲಿ ಗ್ರಾಮ ಪಂಚಾಯ್ತಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದ್ದಾರೆ.