ಗದಗ ಮಾದರಿ ಕುಡಿಯುವ ನೀರು ಘಟಕ ಸ್ಥಾಪನೆ
ಮಂಗಳೂರು: 'ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ರಾಜ್ಯದಲ್ಲಿ ಗದಗ ಮಾದರಿಯ 1 ಸಾವಿರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಸ್ಥಾಪಿಸಲಾಗುವುದು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಮಂಗಳೂರಿನ ಶ್ರೀ ರಾಮಕೃಷ್ಣಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ 20 ಸೆಕೆಂಡಿಗೆ ಒಂದು ಮಗು ಅಶುದ್ಧ ನೀರು ಸೇವಿಸಿ ಸಾವನ್ನಪ್ಪುತ್ತಿದೆ. ಈ ನಿಟ್ಟಿನಲ್ಲಿ ಜನರ ಆರೋಗ್ಯ ಗಮನದಲ್ಲಿಟ್ಟು ಗದಗ ಮಾದರಿಯ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಉದ್ದೇಶಿದ್ದು, ಪ್ರಾಥಮಿಕ ಪ್ರಕ್ರಿಯೆ ಪೂರ್ಣ ಹಂತದಲ್ಲಿದೆ ಎಂದರು.
ರಾಜ್ಯದ ಹಲವೆಡೆ ಕುಡಿಯುವ ನೀರು ಕಲುಷಿತಗೊಂಡಿದೆ. ಗದಗ ಮಾದರಿಯ ನೀರಿನ ಘಟಕ ತೆರೆಯುವ ಮೂಲಕ ರು. 1 ಗೆ 20 ಲೀಟರ್ ನೀರು ನೀಡಲಾಗುತ್ತದೆ. ಪ್ರತಿ ಘಟಕಕ್ಕೆ ಸುಮಾರು ರು. 8 ರಿಂದ 10 ಲಕ್ಷ ವೆಚ್ಚ ತಗಲುತ್ತದೆ. ಗ್ರಾಮ ಅಥವಾ ತಾಲೂಕು ಪಂಚಾಯ್ತಿ ವಾಣಿಜ್ಯ ಸಂಕೀರ್ಣದಲ್ಲಿ ಕೊಠಡಿ ದೊರೆತರೆ ಪ್ರತಿ ಘಟಕಕ್ಕೆ ರು. 5 ಲಕ್ಷ ಸಾಕಾಗುತ್ತದೆ ಎಂದು ಹೇಳಿದರು.
ನಮ್ಮೂರ ಕೆರೆ ಯೋಜನೆ: ರಾಜ್ಯದಲ್ಲಿ ಬತ್ತಿ ಹೋಗಿರುವ 18 ಕೆರೆಗಳನ್ನು ನಮ್ಮೂರ ಕೆರೆ ಯೋಜನೆ ಮೂಲಕ ಅವುಗಳ ಪುನಶ್ಚೇತನ ಮಾಡುವ ಉದ್ದೇಶವಿದೆ. ಈ ವರ್ಷದಲ್ಲಿ 5 ಸಾವಿರ ಕೆರೆಗಳ ಪುನಶ್ಚೇತನ ಗುರಿಯಿದೆ. ಮುಂದಿನ ವರ್ಷದೊಳಗೆ ಎಲ್ಲ ಕೆರೆಗಳನ್ನು ಪುನಶ್ಚೇತನ ಪೂರ್ಣಗೊಳಿಸಲಾಗುವುದು.
ವಿದ್ಯುತ್ ಪಾವತಿ ಸಮಸ್ಯೆಗೆ ಪರಿಹಾರ: ಗ್ರಾಮ ಪಂಚಾಯ್ತಿನಿಂದ ವಿದ್ಯುತ್ ಸರಬರಾಜು ನಿಗಮಗಳಿಗೆ(ಎಸ್ಕಾಂ) ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಗೆ ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೇ ಕೆಪಿಟಿಸಿಎಲ್, ಎಲ್ಲ ಎಸ್ಕಾಂ ಮತ್ತು ಗ್ರಾಮೀಣಾಬಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ್ದು, 6 ತಿಂಗಳೊಳಗೆ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.
15 ಹೊಸ ಯೋಜನೆ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಕಂಪ್ಯೂಟರ್ ಮಾಹಿತಿ ನೀಡುವ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಗ್ರಾಮೀಣ ಗುಡಿ ಕೈಗಾರಿಕೆಯಲ್ಲಿ ತೊಡಗಿರುವವರ ಕಲ್ಯಾಣಕ್ಕಾಗಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರು ಪೂರೈಕೆ, ಮನೆಗೊಂದು ಶೌಚಾಲಯ, ಹೊಲದಿಂದ ಹೊಲಕ್ಕೆ, ಹೊಲದಿಂದ ಗ್ರಾಮಕ್ಕೆ, ಗ್ರಾಮದಿಂದ ನಗರಕ್ಕೆ ರಸ್ತೆ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆಟದ ಮೈದಾನ, ಸ್ಮಶಾನ, ಕುರಿ, ದನದ ದೊಡ್ಡಿ ನಿರ್ಮಾಣ, ಬಯಲು ರಂಗಮಂದಿರ ನಿರ್ಮಾಣ ಸೇರಿದಂತೆ 15 ಹೊಸ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು.
ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ 1,300 ಪಿಡಿಒಗಳ ನೇಮಕ ಆಗಲಿದೆ. ಎಂಜಿನಿಯರ್ ಮತ್ತು ಡಾಟಾ ಎಂಟ್ರಿ ಆಪರೇಟರ್ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದರು.
ಸ್ವದೇಶದಲ್ಲಿ ದುಡಿದು ರೂಪಾಯಿ ಮೌಲ್ಯ ಹೆಚ್ಚಿಸಿ
ಮಂಗಳೂರು: 'ದೇಶದ ಪ್ರತಿಭಾವಂತ ಯುವಕರು ವಿದೇಶದಲ್ಲಿ ಹೋಗಿ ದುಡಿಯದೇ ಸ್ವದೇಶದಲ್ಲಿಯೇ ಸೇವೆ ಸಲ್ಲಿಸುತ್ತಿದ್ದರೆ, ರೂಪಾಯಿ ಮೌಲ್ಯ ಡಾಲರ್ಗೆ ಸಮವಾಗುತ್ತಿತ್ತು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಪ್ರಯುಕ್ತ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸೋಮವಾರ ನಡೆದ 'ವಿವೇಕ ಸಂಸ್ಮರಣೆ' ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತಕ್ಕೊಳಗಾಗಿದ್ದು, ಈ ನಿಟ್ಟಿನಲ್ಲಿ ಯುವಜನತೆ ಚಿಂತಿಸಬೇಕಾಗಿದೆ. ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿ ಎರಡು ವರ್ಷಕ್ಕಿಂತ ಅಧಿಕ ವರ್ಷ ಹೆಚ್ಚಿನ ಸೇವೆ ಸಲ್ಲಿಸಲಾರೆ ಎಂಬ ಸಂಕಲ್ಪ ತೊಡಬೇಕು ಎಂದರು. ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜೀ ಸ್ವಾಮೀಜಿ, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಬೆಂಗಳೂರಿನ ಹ್ಯೂಮನ್ ನೆಟ್ವರ್ಕಿಂಗ್ ಅಕಾಡೆಮಿ ಪ್ರೊ.ಕೆ. ರಘೋತ್ತಮ ರಾವ್ ಇದ್ದರು.