ನಮೋ ಬ್ರಿಗೇಡ್ ಕಚೇರಿ ಉದ್ಘಾಟನೆ
ಮಂಗಳೂರು: ಜನರಲ್ಲಿ ಒಗ್ಗಟ್ಟು ತರಲು ಯತ್ನಿಸಿ, ಭ್ರಷ್ಟಾಚಾರ ವಿರುದ್ಧ ಹೋರಾಡಿ. ನೈತಿಕ ಪೊಲೀಸ್‌ಗಿರಿಗೆ ಉತ್ತೇಜನ ನೀಡಬೇಡಿ, ದೂರದೃಷ್ಟಿ ಇಟ್ಟುಕೊಂಡು ಕಾರ್ಯಾಚರಿಸಿ ಎಂದು 'ನಮೋ ಬ್ರಿಗೇಡ್ ಸೈನಿಕರಿಗೆ' ಬ್ರಿಗೇಡಿಯರ್ ಐ.ಎನ್.ರೈ ಕಿವಿ ಮಾತು ಹೇಳಿದರು.
ಸೋಮವಾರ ಅವರು 'ನಮೋ ಬ್ರಿಗೇಡ್' ಮಂಗಳೂರು ಕಚೇರಿ ಉದ್ಘಾಟಿಸಿ ಮಾತನಾಡಿದರು. ಇನ್ನೊಂದು ಜನ್ಮ ಸಿಕ್ಕಿದರೆ ಸೇನೆಯಲ್ಲಿಯೇ ಸೈನಿಕನಾಗಿ ಸೇವೆ ಸಲ್ಲಿಸಲು ಪ್ರಾಶಸ್ತ್ಯ ನೀಡುತ್ತೇನೆ. ಏಕೆಂದರೆ ಸೇನೆಯಲ್ಲಿ ರಕ್ಷಣೆ ಮತ್ತು ಒಗ್ಗಟ್ಟಿನ ಬಗ್ಗೆ ಮಾತ್ರ ನಾವು ಚಿಂತಿಸುತ್ತೇವೆ. ಇದು ರಾಷ್ಟ್ರೀಯ ಭಾವೈಕ್ಯಕ್ಕೆ ಉದಾಹರಣೆ, ಮೋದಿ ಮುಂದಿನ ಪ್ರಧಾನಿ ಆಗುವ ವಿಶ್ವಾಸ ನನಗಿದೆ ಎಂದರು. ಜನರಲ್ಲಿ ಜಾಗೃತಿ ಮೂಡಿಸಿ, ಅದಕ್ಕಿಂತ ಮೊದಲು ನಮ್ಮಲ್ಲಿ, ನಮ್ಮ ಮನೆಯಲ್ಲಿ ಜಾಗೃತಿಯಾಗಲಿ ಎಂದರು.
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ರಾಜ್ಯಾದ್ಯಂತ 45 ನಮೋಬ್ರಿಗೇಡ್ ಶಾಖೆಗಳು ಆರಂಭಗೊಂಡಿದ್ದು, ಪಕ್ಷಭೇದ ಮರೆತು ಯುವಕರು ಸೇರುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗಬೇಕು ಎಂಬ ಒಂದೇ ಉದ್ದೇಶದಿಂದ ನಮೋಬ್ರಿಗೇಡ್ ಅಸ್ತಿತ್ವಕ್ಕೆ ಬಂದಿದೆ ಎಂದರು. ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ಕಿಣಿ, ನಮೋ ಬ್ರಿಗೇಡ್ ಸಂಘಟಕ ನರೇಶ್ ಶೆಣೈ, ಪ್ರಮೋದ್ ರೈ, ಗೋಪಾಲಕೃಷ್ಣ ಭಟ್ ಇದ್ದರು.