ಪೆರೋಲ್ನಲ್ಲಿ ಹೊರಬಂದು ಪರಾರಿಯಾದ ಅಪರಾಧಿ
ಬಂಟ್ವಾಳ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬ ಪೆರೋಲ್ನಲ್ಲಿ ಬಂದವ ಮರಳಿ ಜೈಲು ಸೇರದೆ ಪರಾರಿಯಾಗಿರುವ ಬಗ್ಗೆ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಸಮೀಪದ ರೆಂಗೇಲು ನಿವಾಸಿ ಇಸುಬು ಮೊಲಾರ್ ಯಾನೆ ಯೂಸುಫ್ ಮುಸ್ಲಿಯಾರ್ ಎಂಬಾತನೇ ಪೆರೋಲ್ನಲ್ಲಿ ಬಂದು ಮರಳಿ ಜೈಲು ಸೇರದೆ ಪರಾರಿಯಾಗಿದ್ದಾನೆ.
2005 ರಲ್ಲಿ ತನ್ನ ಎರಡನೇ ಹೆಂಡತಿ ಮರಿಯಮ್ಮ ಎಂಬಾಕೆಯನ್ನು ಕೊಲೆಗೈದು, ವಿವಸ್ತ್ರಗೊಳಿಸಿ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಫಲ್ಗುಣಿ ನದಿಗೆಸೆದಿದ್ದ. ಈ ಬಗ್ಗೆ ಬಜ್ಪೆ ಪೊಲೀಸರು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಮಂಗಳೂರು ಸೆಶನ್ಸ್ ನ್ಯಾಯಾಲಯ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಹೊರಡಿಸಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಬೆಳಗಾವಿ ಜೈಲ್ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಸುಬು ಇತ್ತೀಚೆಗೆ ತಾಯಿಗೆ ಸೌಖ್ಯವಿಲ್ಲ ಎಂಬ ನೆಪವೊಡ್ಡಿ 45 ದಿನಗಳ ಪೆರೋಲ್ ಮೇಲೆ ಜುಲೈ 20 ರಂದು ಊರಿಗೆ ಬಂದಿದ್ದ. ಸೆ. 4 ರಂದು ಮರಳಿ ಜೈಲು ಸೇರಬೇಕಾದ ಇಸುಬು ಜೈಲು ಸೇರದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಜೈಲು ಸುಪರಿಂಟೆಂಡೆಂಟ್ ಸೆ. 7 ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಈತನ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.