ಯೇನೆಪೋಯ ಕಾಲೇಜ್: ನೀತಿಶಾಸ್ತ್ರ ಮುಂದುವರಿಕೆ ಶಿಕ್ಷಣ
ಮಂಗಳೂರು: ಯೇನೆಪೋಯ ವಿಶ್ವ ವಿದ್ಯಾಲಯ ನೀತಿ ಶಾಸ್ತ್ರ ಕೇಂದ್ರ ವತಿಯಿಂದ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ನೀತಿ ಶಾಸ್ತ್ರ ವಿಷಯ ಹಾಗೂ ಸವಾಲುಗಳು ವಿಚಾರ ಬಗ್ಗೆ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮ ನಡೆಯಿತು.
ವೈದ್ಯಕೀಯ ಸಮುದಾಯ, ದಂತ ವಿಜ್ಞಾನ ಹಾಗು ಇತರ ವಿಭಾಗದ 250 ಪ್ರತಿನಿಧಿಗಳು ಭಾಗವಹಿಸಿದ್ದರು. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ಸ್ಥಾಪಕ ಸಂಪಾದಕ ಡಾ. ಅಮರ್ ಜೆಸಾನಿ ಉದ್ಘಾಟಿಸಿದರು. ಯುನೈಟೆಡ್ ಕಿಂಗ್ಡಮ್ನ ಪ್ರೊ. ಡಾ. ಆ್ಯಂಗಸ್ ಡಾಸನ್, ಯೇನೆಪೋಯ ವಿವಿ ಕುಲಪತಿ ಡಾ.ಪಿ.ಚಂದ್ರಮೋಹನ್, ಡೀನ್ ಡಾ.ಗುಲಾಂ ಜೀಲಾನಿ ಖಾದಿರಿ, ಬರ್ಮಿಂಗ್ ಹ್ಯಾಮ್ ವಿವಿ ಪ್ರೊ. ನೀತಿಶಾಸ್ತ್ರ, ಇತಿಹಾಸ ಮತ್ತು ಸಮಾಜ ವಿಭಾಗ ಮುಖ್ಯಸ್ಥ ಡಾ.ಆ್ಯಂಗಸ್ ಡಾಸನ್, ಕುಲಸಚಿವ ಡಾ.ರಘುವೀರ್, ಪ್ರೊ. ಅಭಯ್ ನೀರ್ಗುಡೆ ಇದ್ದರು.
ಫೊರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥೆ ಡಾ.ವೀಣಾ ವಾಸ್ವಾನಿ ಕಾರ್ಯಕ್ರಮ ನಿರೂಪಿಸಿದರು.
ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ರವಿ ವಾಸ್ವಾನಿ ವಂದಿಸಿದರು.
ಮಠಂದೂರು ಹೇಳಿಕೆ: ಸ್ವಾಭಿಮಾನಿ ವೇದಿಕೆ ಖಂಡನೆ
ಪುತ್ತೂರು: 'ಇತ್ತೀಚೆಗೆ ತೋಟಗಾರಿಕೆ ಇಲಾಖೆಯಿಂದ ವಿತರಿಸಲಾದ ಗೊಬ್ಬರ ಸ್ವಾಭಿಮಾನಿ ವೇದಿಕೆ ಕಾರ್ಯಕರ್ತರ ಮನೆಗೆ ಹೋಗಿರಬಹುದು' ಎಂಬ ಬಿಜೆಪಿ ನಾಯಕ ಸಂಜೀವ ಮಠಂದೂರು ಅವರ ಹೇಳಿಕೆ ಬಹುದೊಡ್ಡ ಸುಳ್ಳು ಹೇಳಿಕೆಯಾಗಿದ್ದು, ಹತಾಶ ಮನೋಭಾವದಿಂದ ಅವರು ಇಂತಹ ಟೀಕೆ ಮಾಡಿದ್ದಾರೆ ಎಂದು ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೀವ ಮಠಂದೂರು ಇಂತಹ ಕೀಳು ಮಟ್ಟದ ಹೇಳಿಕೆ ನೀಡಬಾರದಿತ್ತು. ತೋಟಗಾರಿಕಾ ಇಲಾಖೆಯಿಂದ ಈತನಕ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳದ ಸ್ವಾಭಿಮಾನಿ ವೇದಿಕೆ ಕಾರ್ಯಕರ್ತರು ಅವರ ಟೀಕೆಗೆ ಅರ್ಹರಲ್ಲ ಎಂದರು. ತೋಟಗಾರಿಕಾ ಇಲಾಖೆಯಲ್ಲಿ ನಡೆದಿರುವ ಗೊಬ್ಬರ ಅವ್ಯವಹಾರದ ಬಗ್ಗೆ ಶಾಸಕಿ ಶಕುಂತಳಾ ಶೆಟ್ಟಿ ಸಿಒಡಿ ತನಿಖೆಗೆ ಶಿಫಾರಸು ಮಾಡಿರುವುದನ್ನು ಸ್ವಾಭಿಮಾನಿ ವೇದಿಕೆ ಸ್ವಾಗತಿಸುತ್ತಿದೆ ಎಂದು ಹೇಳಿದರು. ಸ್ವಾಭಿಮಾನಿ ವೇದಿಕೆ ಪದಾಧಿಕಾರಿಗಳಾದ ಬನಾರಿ ಗೋಪಾಲಕೃಷ್ಣ ಭಟ್, ಸಂಜೀವ ಕಲ್ಲೇಗ, ಮಂಜುನಾಥ ಇದ್ದರು.