ಸೌಜನ್ಯಾ ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸಿ
ಬೆಳ್ತಂಗಡಿ: ಪ್ರತಿಭಟನಾ ಧರಣಿಯಲ್ಲಿ ಎನ್. ಪ್ರಭಾ ಒತ್ತಾಯ
ಬೆಳ್ತಂಗಡಿ: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಕ್ಕಿದೆ. ಆದರೆ ಧರ್ಮಸ್ಥಳದ ನೇತ್ರಾವತಿ ಸಮೀಪ ಅತ್ಯಾಚಾರಕ್ಕೊಳಗಾಗಿ ಜೀವ ಕಳೆದುಕೊಂಡ ಸೌಜನ್ಯಾಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಹೋರಾಡುವ ಅವಶ್ಯಕತೆ ಇದೆ ಎಂದು ಸಮತಾ ಭಾರತ ಜ್ಞಾನ ವಿಜ್ಞಾನ ರಾಜ್ಯ ಸಂಚಾಲಕಿ, ಮಹಿಳಾ ಚಿಂತಕಿ ಎನ್. ಪ್ರಭಾ ಹೇಳಿದ್ದಾರೆ.
ಬೆಳ್ತಂಗಡಿ ತಾಲೂಕು ಕಚೇರಿ ಎದುರುಗಡೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಸೋಮವಾರ ಸೌಜನ್ಯಾ ಅತ್ಯಾಚಾರ- ಕೊಲೆ ಪ್ರಕರಣದ ಸಿಬಿಐ ತನಿಖೆ ಹಾಗೂ ತಾಲೂಕಿನ ಮಹಿಳೆಯರ ಅಸಹಜ ಸಾವುಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು, ದೌರ್ಜನ್ಯಕ್ಕೆ ಈಡಾದವರಿಗೆ ನ್ಯಾಯವೇ ಇಲ್ಲದಂತಾಗಿದೆ. ದೆಹಲಿ ಪ್ರಕರಣದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಸೌಜನ್ಯಾ ಪ್ರಕರಣದಲ್ಲಿ ಮೌನ ತಾಳಿರುವುದು ನಾಚಿಗೆಗೇಡು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳಿಗೆ ನಾಚಿಕೆ ಆಗಬೇಕು ಎಂದು ಹೇಳಿದ ಅವರು, ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಎನ್.ಎಲ್. ಭರತ್ರಾಜ್, ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸದಿದ್ದರೆ ಅ.9ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ಮುಂದಿನ ಹಂತವಾಗಿ ನ್ಯಾಯಯುತ ಬೇಡಿಕೆಗಾಗಿ ಗೃಹ ಸಚಿವರ ಕಚೇರಿ ಎದುರೇ ಧರಣಿ ನಡೆಸಲು ಡಿವೈಎಫ್ಐ ಸಿದ್ಧವಾಗಿದೆ ಎಂದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಸುಕನ್ಯಾ, ಶಿವಕುಮಾರ್, ಬಿ.ಎಂ. ಭಟ್, ಶೇಖರ ಲಾಯಿಲ, ಮಧುಸೂದನ್, ಕಿರಣ, ಪ್ರಭಾ, ಪ್ರಶಾಂತ್, ಕುಮಾರಿ, ಪಟ್ರಮೆ ಗ್ರಾ.ಪಂ. ಸದಸ್ಯರಾದ ಯಮುನಾ, ಹಂಝ ಮೊದಲಾದವರು ಇದ್ದರು.
ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.