ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೇತ್ರಾವತಿ ತಿರುವು ಕುರಿತು ಸರಿಯಾದ ಅಧ್ಯಯನ ನಡೆಯಲಿ: ಕಿಶೋರ್

Mainashree
Updated On : 19 Sept 2013, 10:24 am

ಮಂಗಳೂರು: 'ನೇತ್ರಾವತಿ ನದಿ ನೀರನ್ನು ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ತಜ್ಞರು ನೇತ್ರಾವತಿ ನದಿ ನೀರು ಹಾಗೂ ಪರಿಸರದ ಕುರಿತು ಮಾರ್ಚ್‌ನಲ್ಲಿ ಬಂದು ಸರಿಯಾದ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿ' ಎಂದು ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದ್ದಾರೆ.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಮೇ ವರೆಗೆ ನೇತ್ರಾವತಿ ತಟದಲ್ಲಿರುವ ಸುಮಾರು 18 ಗ್ರಾಮಗಳು ನೀರಿನ ಅಭಾವ ಎದುರಿಸುತ್ತದೆ. ವರದಿಯಲ್ಲಿ ನೇತ್ರಾವತಿ ನದಿ ನೀರಿನ ಹರಿವು 460 ಟಿಎಂಸಿ ಎಂಬುದಾಗಿದೆ. ಆದ್ದರಿಂದ ತಜ್ಞರು ಮಾರ್ಚ್ ತಿಂಗಳಿನಲ್ಲಿ ಈ ಪ್ರದೇಶಕ್ಕೆ ಬಂದು ಇಲ್ಲಿನ ಪರಿಸರ ಹಾಗೂ ನೀರಿನ ಹರಿವಿನ ಬಗ್ಗೆ ಅಧ್ಯಯನ ನಡೆಸಲಿ ಎಂದರು.
 ಈಗಾಗಲೇ ವರದಿ ಸಲ್ಲಿಸಿರುವ ತಜ್ಞರು ಪರಿಸರ ಸಂಶೋಧಕರಲ್ಲ, ನೀರಾವರಿ ಎಂಜಿನಿಯರ್. ಬೆಂಗಳೂರಿನಲ್ಲಿ ಕುಳಿತು ಸೆಟಲೈಟ್ ಮೂಲಕ ಅಧ್ಯಯನ ನಡೆಸದೆ, ಪರಿಸರಕ್ಕೆ ಭೇಟಿ ಕೊಟ್ಟು ಅಲ್ಲಿ ಸ್ಥಿತಿಯನ್ನು ಅರಿತುಕೊಳ್ಳಲಿ. ಈಗಾಗಲೇ ಪಶ್ಚಿಮಘಟ್ಟದಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳಿಂದ ಪರಿಸರ ವಿನಾಶದಂಚಿನತ್ತ ಸಾಗಿದೆ. ಅಲ್ಲದೆ ಕಾಡಿನಲ್ಲಿರುವ ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವೆ ಎಂದರು.
 ಪರಿಸರ ಉಳಿಸುವ ನೆಪದಲ್ಲಿ ಕೆಲವೊಂದು ಪರಿಸರವಾದಿಗಳು, ಎನ್‌ಜಿಒಗಳ ಯೋಜನೆಗಳಾದ ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್, ಗ್ರೇಟರ್ ತಲಕಾವೇರಿ, ಮಾನವ-ಪ್ರಾಣಿ ಸಂಘರ್ಷ ತಡೆ ಯೋಜನೆ, ಹುಲಿ ಯೋಜನೆಗಳನ್ನು ಪಶ್ಚಿಮಘಟ್ಟದಲ್ಲಿ ಸೇರಿಸುವ ಹುನ್ನಾರ ನಡೆಸುತ್ತಿದ್ದು, ಸರ್ಕಾರ ಕೂಡಲೇ ಇವುಗಳನ್ನು ಕೈಬಿಡಬೇಕು.
ಕಾಡಂಚಿನ ಪ್ರದೇಶದ ಕೃಷಿಕರ, ಕೂಲಿ ಕಾರ್ಮಿಕರ, ಬುಡಕಟ್ಟು ಜನಾಂಗದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಯೋಜನೆಯಿಂದ 18 ಗ್ರಾಮಗಳನ್ನು ಕೈಬಿಟ್ಟಿರುವುದಾಗಿ ಹಿಂದಿನ ಸರ್ಕಾರದ ಅರಣ್ಯ ಸಚಿವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಲಿಖಿತವಾಗಿ ಅಧಿಕೃತ ಪತ್ರ ನೀಡಿರುತ್ತಾರೆ. ಆದರೆ ಈಗ ಸರ್ಕಾರ ಆನೆ ಕಾರಿಡಾರ್ ಯೋಜನೆಯನ್ನು ಮಾನವ- ಪ್ರಾಣಿ ಸಂಘರ್ಷ ತಡೆ ಯೋಜನೆಯೆಂಬುದಾಗಿ ರೂಪಾಂತರಗೊಳಿಸಿ ಹೇಳಿಕೆ ನೀಡುತ್ತಿದ್ದು, ಈ ಯೋಜನೆ ಎರಡು ಮುಖದ ಒಂದೇ ನಾಣ್ಯ ಇದ್ದಂತೆ. ಸರ್ಕಾರ ಇಂಥ ಹೇಳಿಕೆಯಿಂದ ಜನರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಸರಿಯಲ್ಲ ಎಂದರು.
ಆನೆ ಹಾವಳಿಯನ್ನು ತಡೆಗಟ್ಟಲು ಗುಂಡ್ಯ ಕಿರು ಜಲವಿದ್ಯುತ್ ಯೋಜನೆ ಕಾರ್ಯವನ್ನು 6 ತಿಂಗಳು ನಿಲ್ಲಿಸಿದರೆ ಸಾಕಾಗುತ್ತದೆ. ಅಲ್ಲದೆ ಸುರಕ್ಷಿತ ಕಾಯ್ದೆಯನ್ನು ಗಟ್ಟಿಗೊಳಿಸಲಿ. ಆದಿವಾಸಿಗಳಿಗೆ ಅರಣ್ಯದ ಬಗ್ಗೆ ತಿಳಿದಿದ್ದು, ಅವರಿಗೆ ಗಾರ್ಡ್ ಹುದ್ದೆ ನೀಡಿದರೆ ಕಾಡಿನಲ್ಲಿ ನಡೆಯುತ್ತಿರುವ ಗಾಂಜಾ, ಮರ ಕಳ್ಳತನ ತಡೆಗಟ್ಟಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement