ನೇತ್ರಾವತಿ ತಿರುವು ಜನರಿಗೆ ಮಾರಕ: ಮಹಾಬಲೇಶ್ವರ ಭಟ್
ಮಂಗಳೂರು: 'ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ಸಂಸ್ಕೃತಿ, ನಾಶಗೊಳಿಸಿದರೆ ಅದು ವಿಕೃತಿಯಾಗುತ್ತದೆ. ನೇತ್ರಾವತಿ ನದಿ ತಿರುವು ಯೋಜನೆಯ ಅಸಮರ್ಪಕ ಸಮೀಕ್ಷೆಯ ದುಷ್ಪರಿಣಾಮ ಜನರು ಎದುರಿಸಬೇಕಾಗುತ್ತದೆ' ಎಂದು ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಹೇಳಿದ್ದಾರೆ.
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ನಡೆದ ಚಾರಣ, ಪರಿಸರ, ಗಾಳಿಪಟ ಎಂಬ ತ್ರಿವಳಿ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಪಶ್ಚಿಮಘಟ್ಟ ತುಂಬಾ ಸೂಕ್ಷ್ಮ ಪ್ರದೇಶ. ಚಾರಣಕ್ಕೆ ತೆರಳಿದಾಗ ಮಾತ್ರ ಅಲ್ಲಿನ ಪರಿಸರ, ವನ್ಯ ಜೀವಿಗಳ ಮಹತ್ವದ ಬಗ್ಗೆ ತಿಳಿಯುತ್ತದೆ. ಒಮ್ಮೆ ನಾಶವಾದ ನಮ್ಮ ನೈಸರ್ಗಿಕ ಸಂಪತ್ತು ಮತ್ತೆ ಗಳಿಸುವುದ ಅಸಾಧ್ಯ. ಆದ್ದರಿಂದ ನೇತ್ರಾವತಿ ನದಿಯನ್ನು ಉಳಿಸಿಕೊಳ್ಳುವುದು ಕರಾವಳಿಗರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭ ಎಂ.ಎಸ್. ಮಹಾಬಲೇಶ್ವರ ಮತ್ತು ಅವರ ಪತ್ನಿ ಅನ್ನಪೂರ್ಣ ಅವರನ್ನು ಸನ್ಮಾನಿಸಲಾಯಿತು.ಕೌನ್ಸಿಲ್ ಅಧ್ಯಕ್ಷ ಯು. ರಾಮರಾವ್, ಕಾರ್ಯದರ್ಶಿ ಪಿ.ಬಿ. ಸರಳಾಯ, ಖಜಾಂಜಿ ಶೋಭಾ ರವೀಂದ್ರ ರಾವ್ ಹಾಜರಿದ್ದರು.