ಮಂಗಳೂರು- ಬೆಂಗಳೂರು ಹೆಚ್ಚುವರಿ ರೈಲು ಆಗ್ರಹಿಸಿ ಪ್ರತಿಭಟನೆ
ಪುತ್ತೂರು: ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ರೇಲ್ವೆ ಇಲಾಖೆಯಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಹಾಗೂ ನಿಲ್ದಾಣ ದುರಸ್ತಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪುತ್ತೂರು ರೈಲು ನಿಲ್ದಾಣ ಬಳಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಕೇಂದ್ರ ರೇಲ್ವೇ ಇಲಾಖೆ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನು ಕಡೆಗಣಿಸುತ್ತಿದೆ. ಇಲ್ಲಿನ ರೈಲಿನ ಲಾಭ ಜನರಿಗೆ ಸಿಗುತ್ತಿಲ್ಲ ಎಂದ ಅವರು, ಬ್ರಾಡ್ಗೇಜ್ ಹೆಸರಿನಲ್ಲಿ ಹತ್ತಿಪ್ಪತ್ತು ವರ್ಷಗಳ ಕಾಲ ನಮಗೆ ವಂಚನೆ ಮಾಡಲಾಗಿತ್ತು. ಮಂಗಳೂರು- ಬೆಂಗಳೂರು ನಡುವೆ ಹಗಲು ರೈಲು ಓಡಾಟ ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ. ಕಾರವಾರ- ಕಣ್ಣೂರು ರೈಲು ಓಡಾಟದಲ್ಲಿ ನಿರಂತರ ಜನ ದಟ್ಟಣೆಯಿದ್ದು, ಹೆಚ್ಚುವರಿ ರೈಲಿನ ಬೇಡಿಕೆ ಜನರಲ್ಲಿದೆ. ಪ್ಯಾಸೆಂಜರ್ ರೈಲಿನ ಜನರಲ್ ಬೋಗಿಗಳಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಇವೆಲ್ಲವನ್ನೂ ತಕ್ಷಣವೇ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ರೇಲ್ವೆ ವಿಭಾಗೀಯ ಸುರಕ್ಷಾ ಮ್ಯಾನೆಜರ್ ಶ್ರೀಕಂಠ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶ್ರೀಕಂಠ, ಪ್ಯಾಸೆಂಜರ್ ರೈಲು ಯಾನ ಆರಂಭಿಲು ದ್ವಿಪಥ ಹಳಿ ನಿರ್ಮಿಸಬೇಕಾಗಿದೆ. ಆದರೆ ಇದಕ್ಕೆ ಅರಣ್ಯ ಇಲಾಖೆಯಿಂದ ಸಮಸ್ಯೆಗಳಾಗುತ್ತಿವೆ. ಗೂಡ್ಸ್ ರೈಲು ಯಾನಕ್ಕಿಂತ ಹೆಚ್ಚಿನ ಭದ್ರತೆಗಳನ್ನು ಪ್ಯಾಂಸೆಂಜರ್ ರೈಲು ಯಾನಕ್ಕೆ ನೀಡಬೇಕಾಗಿರುವುದರಿಂದ ಘಟ್ಟ ಪ್ರದೇಶವಾಗಿರುವ ಇಲ್ಲಿ ಪ್ಯಾಸೆಂಜರ್ ರೈಲು ಯಾನಕ್ಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾನೂನು ತೊಡಕು ಇದೆ ಎಂದು ತಿಳಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಪಿ.ಕೆ ಸತೀಶನ್, ಸಿಐಟಿಯು ರಿಕ್ಷಾ ಚಾಲಕ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.