ಚಾತುರ್ಮಾಸ್ಯ ಸತ್ಯ, ಸತ್ವಗಳ ವಿಜಯ: ಶ್ರೀ
ವಿಟ್ಲ: ಮಾಣಿಯಲ್ಲಿ ನಡೆದ ಚಾತುರ್ಮಾಸ್ಯ ಸತ್ಯ ಮತ್ತು ಸತ್ವಗಳ ವಿಜಯ. ಮಂಗಳೂರು ಹೋಬಳಿಯ ಶಿಷ್ಯರ ತಾತ್ವಿಕ ಮತ್ತು ಸಾತ್ವಿಕ ಕಾರ್ಯಕ್ಕೆ ಸಹಕಾರ ಮೆಚ್ಚುವಂಥದ್ದು, ಆಧುನಿಕ ಯುಗದಲ್ಲೂ ಸತ್ಕಾರ್ಯಕ್ಕೆ ಸಹಕರಿಸುವವರಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ವಿಜಯ ಚಾತುರ್ಮಾಸ್ಯ ವ್ರತಚಾರಣೆಯ ಸೀಮೋಲ್ಲಂಘನ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮನ ಮನೆಗಳ ನಡುವೆ ಅಂತರವಿಲ್ಲದ ಸಮಾಜದ ಭರವಸೆ ತಾಳುವ ಕಾಲ ಹತ್ತಿರ ಬಂದಿದೆ. ಸೇವೆಗೆ ಸದಾ ಸಿದ್ಧ ಎನ್ನುವ ಹನುಮನಂತೆ ನೀವೆಲ್ಲ ಇದ್ದೀರಿ ಎಂದು ಶ್ರೀಗಳು ಹೇಳಿದರು.
8 ಕುಟುಂಬಗಳಿಗೆ ಮನೆ: ತೆಕ್ಕುಂಜ ಪ್ರಕಾಶ್ ಭಟ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಿದರು. ಅಲ್ಲದೆ, ಸಾಗರದಲ್ಲಿ ಭಾರಿ ಮಳೆಗೆ ಕುಸಿದ 8 ಕುಟುಂಬಗಳ ಮನೆಗಳಿಗೆ ಹುಲುಕೋಡು ಶುಭಾಶಯ ಯೋಜನೆ ಜಾರಿಗೊಳಿಸಿ, ಶ್ರೀಮಠದ ವತಿಯಿಂದ ತಲಾ ರು. 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುವುದು ಎಂದು ಘೋಷಿಸಲಾಯಿತು. ಧರ್ಮಭಾರತೀ ಪತ್ರಿಕೆಯ ವಿಶೇಷ ಪುರವಣಿ 'ಶ್ರೀಮುಖ'ವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಅಗಡಿ ಆನಂದವನ ಮಠದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ರಾಮಕಥಾ ನಡೆಸಿ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಇಂಥ ಗುರುಕಾರುಣ್ಯ ಸಿಕ್ಕಿರುವುದು ಮಹಾಭಾಗ್ಯ ಎಂದರು.
ಆರ್.ಎಸ್. ಅಗರ್ವಾಲ್ ಅವರು ಶ್ರೀಮಠದ ವಿಶ್ವವಿದ್ಯಾನಿಲಯದ ಕನಸು ನನಸು ಮಾಡುವ ಭರವಸೆ ನೀಡಿದರು. ಆರ್.ಎಸ್. ಗೋಯಂಕಾ ಮಾತನಾಡಿ, ಮುಂದಿನ ವರ್ಷದಿಂದ ತಾನು ಶ್ರೀಮಠದ ಕಾಮದುಘಾ ಯೋಜನೆಗೆ ಮೀಸಲು ಎಂದು ಘೋಷಿಸಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ಮೋಹನ ಹೆಗಡೆ ಅಭಿನಂದನ ಭಾಷಣ ಮಾಡಿದರು. ತೆಕ್ಕುಂಜ ಪ್ರಕಾಶ್ ಭಟ್ ಅವರ ಪತ್ನಿ ಈಶ್ವರೀ, ಮಹಾಸರ್ವಾಧಿಕಾರಿ ಟಿ.ಮಡಿಯಾಲ್, ಶ್ರೀಮುಖ ಪತ್ರಿಕೆ ಸಂಪಾದಕ ರಮೇಶ ಹೆಗಡೆ ಗುಂಡೂಮನೆ ಇದ್ದರು. ಶ್ರೀಗಳು ನಡೆಸುತ್ತಿರುವ ರಾಣೆಬೆನ್ನೂರು ಗೋಶಾಲೆಗೆ ಡಾ. ಸಂಜಯ ನಾಯಕ್ ರು. 5 ಲಕ್ಷ ನೀಡುವುದಾಗಿ ಘೋಷಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ದಂಪತಿ ಸಭಾಪೂಜೆ ನೆರವೇರಿಸಿದರು. ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಧರ್ಮಭಾರತೀ ಪತ್ರಿಕೆ ಪ್ರಧಾನ ಸಂಪಾದಕ ವಿದ್ವಾನ್ ಜಗದೀಶ ಶರ್ಮಾ ಪ್ರಸ್ತಾಪಿಸಿದರು. ಸತ್ಯಶಂಕರ ಹಿಳ್ಳೇಮನೆ ನಿರೂಪಿಸಿದರು.
ರಾಜಸನ್ಯಾಸ ಪರಂಪರೆಗೆ ಕಿರೀಟೋತ್ಸವ
ಧರ್ಮಪೀಠಗಳಲ್ಲಿ ರಾಜಪೀಠವೂ ಒಂದು. ರಾಜಪೀಠ ಎಂದರೆ ರಾಜ ಸನ್ಯಾಸ ಪರಂಪರೆ. ಈ ಪೀಠದಲ್ಲಿರುವವರು ಧಾರ್ಮಿಕ ಮಾರ್ಗದರ್ಶನ ಜತೆಗೆ ಧಾರ್ಮಿಕ ಆಡಳಿತ ನಿರ್ವಹಿಸುವುದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ವಾಡಿಕೆ. ಧಾರ್ಮಿಕ ಆಡಳಿತವಿರುವ ಪೀಠ ರಾಜಮಾನ್ಯ ಪೀಠ. ಅದನ್ನು ಪ್ರತಿಬಿಂಬಿಸಲು ಅಡ್ಡಪಲ್ಲಕಿ ಉತ್ಸವ, ಕಿರೀಟಧಾರಣೆ, ಸಿಂಹಾಸನಾರೋಹಣ ನೆರವೇರಿಸುತ್ತಾರೆ.