ಸುದ್ದಿ ಸಂಕ್ಷೇಪ
ಇಂದಿನಿಂದ ಯಕ್ಷೋತ್ಸವ
ಉಡುಪಿ: ಶಿವಮೊಗ್ಗದ ನಾಟ್ಯಶ್ರೀ ಕಲಾತಂಡ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮತ್ತು ಯಕ್ಷೋತ್ಸವ - 2013 ಪ್ರಶಸ್ತಿ ಪ್ರದಾನ ಸಮಾರಂಭ ಸೆ.20ರಿಂದ 22ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಶಿವಮೊಗ್ಗ ಡಿವಿಎಸ್ ಪಪೂ ಕಾಲೇಜಿನ ಉಪನ್ಯಾಸಕ ವಿದ್ವಾನ್ ದತ್ತಮೂರ್ತಿ ಭಟ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ 5.30ಕ್ಕೆ ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮತ್ತಿತ್ತರು ಭಾಗವಹಿಸಲಿದ್ದಾರೆ. 22ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನಾಟ್ಯಶ್ರೀ ಕಲಾತಂಡದ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಜಿ.ಪಿ. ಪ್ರಭಾಕರ್, ರವಿ ಆಚಾರ್ಯ ಉಪಸ್ಥಿತರಿದ್ದರು.
28 ಕೋಟಿ ಸಾಲ ತೆಗೆಸಿಕೊಡಲು 16 ಲಕ್ಷ ಕಮಿಷನ್ ಪಡೆದು ವಂಚನೆ
ಮಂಗಳೂರು: ಹೈದರಾಬಾದ್ ಉದ್ಯಮಿಗೆ ಸಾಲ ನೀಡುವುದಾಗಿ ನಂಬಿಸಿದ ಮಂಗಳೂರು ನಿವಾಸಿಗಳು 16 ಲಕ್ಷ ವಂಚನೆ ಮಾಡಿದ್ದಾರೆ. ರಾಧಾಕೃಷ್ಣ ಮತ್ತು ಸಂದೀಪ ದಾತ್ರೆ ವಿರುದ್ಧ ಉದ್ಯಮಿ ಸಂಶುದ್ದೀನ್ ಬಾಬರ್ ಬಂದರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಆಸ್ಪತ್ರೆ ಹೊಂದಿರುವ ಬಾಬರ್, 28 ಕೋಟಿ ಸಾಲ ತೆಗೆಸಿಕೊಡಲು 16 ಲಕ್ಷ ಕಮಿಷನ್ ಮೊದಲೇ ನೀಡಿದ್ದರು. ಆದರೆ ಸಾಲ ನೀಡಿಲ್ಲ ಎಂದು ಉದ್ಯಮಿ ಆರೋಪಿಸಿದ್ದಾರೆ. ಶೇ.8 ಕಮಿಷನ್ ಆಧಾರದಲ್ಲಿ ಸಾಲ ಒದಗಿಸಿಕೊಡುವುದಾಗಿ ಇಬ್ಬರ ಜತೆ ಒಪ್ಪಂದವಾಗಿತ್ತು. ಆದರಂತೆ ಶೇ.3 ಕಮಿಷನ್ ಮೊದಲೇ ನೀಡಲು ಒಪ್ಪಂದವಾಗಿತ್ತು. ಬೆಂಗಳೂರಿಗೆ ಬಂದು ಮಾತುಕತೆ ಕೂಡಾ ನಡೆಸಲಾಗಿತ್ತು. ಮಂಗಳೂರಿಗೆ ಬಂದು ಸಾಲ ಪಡೆಯಿರಿ ಎಂದು ಇಬ್ಬರು ಹೇಳಿದ್ದರು. ಸೆ.12ರಂದು ಬಾಬರ್ ಮಂಗಳೂರಿಗೆ ಬಂದಿದ್ದರು. ಇಬ್ಬರು 16 ಲಕ್ಷ ಕಮಿಷನ್ ಪಡೆದಿದ್ದು, ಕಮಿಷನ್ ಪಡೆ ಬಳಿಕ ಸಾಲ ಮೊತ್ತ ನೀಡಲೇ ಇಲ್ಲ ಎಂದು ಉದ್ಯಮಿ ಆರೋಪಿಸಿದ್ದಾರೆ.