ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಸ್ತಿದಂತ ಸಿಂಹಾಸನಾರೂಢ ರಾಜಸನ್ಯಾಸಿ

Mainashree
Updated On : 20 Sept 2013, 10:25 am

ಪೆರಾಜೆ (ಮಾಣಿ ಮಠ): ಭಕ್ತರ ಜಯಘೋಷಗಳ ಮಧ್ಯೆ ಛತ್ರ, ಚಾಮರ ಸೇವೆಯಲ್ಲಿ ಅಡ್ಡಪಲ್ಲಕಿಯಲ್ಲಿ ವಿರಾಜಮಾನರಾದ ರಾಜಸನ್ಯಾಸಿ. ರಾಜಪಥದಲ್ಲಿ ಪಲ್ಲಕಿಯನ್ನು ತರುತ್ತಿದ್ದಂತೆ ಮಂಗಳ ವಾದ್ಯಗಳ ನಿನಾದ. ವೇದಿಕೆಯಲ್ಲಿ ವಿಖ್ಯಾತ ವ್ಯಾಖ್ಯಾನ ಹಸ್ತಿದಂತ ಸಿಂಹಾಸನಾರೂಢರಾದ ರಾಘವೇಶ್ವರಶ್ರೀಗಳು.
 ಹೊಸನಗರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರ ವಿಜಯ ಚಾತುರ್ಮಾಸ್ಯದ ಅಪ್ರತಿಮ ವೈಭವದ ಕಿರೀಟೋತ್ಸವದ ಕ್ಷಣ. ಇದಕ್ಕೆ ಸಾಕ್ಷಿಯಾದ್ದು ಬಂಟ್ವಾಳ ಪೆರಾಜೆ ಮಾಣಿ ಮಠ. ವಿಜಯ ಚಾತುರ್ಮಾಸ್ಯ ಸೇವಾ ಸಮಿತಿ ಚಾತುರ್ಮಾಸ್ಯದ ಕೊನೆ ದಿನ ಗುರುವಾರ ಇದನ್ನು ಆಯೋಜಿಸಿತ್ತು.
ಸಂಜೆ ಸ್ವರ್ಣಮಂಟದಲ್ಲಿ ಪಟ್ಟದ ದೇವರನ್ನು ಅರ್ಚಿಸಿದ  ರಾಘವೇಶ್ವರಶ್ರೀಗಳು, ಶ್ರೀರಾಮ ದೇವರ ಎದುರು ಶುದ್ಧ ರೇಷ್ಮೆ ಪೋಷಾಕು ಧರಿಸಿ ಸ್ವರ್ಣರತ್ನ ಖಚಿತ ಕಿರೀಟ ಧಾರಣೆ ಮಾಡಿದರು. ಬಳಿಕ ವಿಶೇಷವಾಗಿ ಅಲಂಕರಿಸಿದ ಅಡ್ಡಪಲ್ಲಕಿಯಲ್ಲಿ ಶ್ರೀಗಳನ್ನು ಕುಳ್ಳಿರಿಸಲಾಯಿತು. ಭಕ್ತರ ಜೈಕಾರದ ಮಧ್ಯೆ ಪಲ್ಲಕಿಯನ್ನು ರಾಜಪಥದಲ್ಲಿ ಕೊಂಡೊಯ್ಯಲಾಯಿತು. ಉತ್ಸವಕ್ಕೆ ಕೀಲು ಕುದುರೆ, ಬ್ಯಾಂಡ್ ವಾಲಗ, ಮಂಗಳವಾದ್ಯ ಮೇಳೈಸಿತು. ಪಲ್ಲಕ್ಕಿಯಲ್ಲಿ ಆಗಮಿಸಿದ ರಾಘವೇಶ್ವರಶ್ರೀಗಳನ್ನು ಹಸ್ತಿದಂತ ರತ್ನಖಚಿತ ಸಿಂಹಾನಾನದತ್ತ ಕರೆತರಲಾಯಿತು. ಬಳಿಕ ಶ್ರೀಗಳು ಸಿಂಹಾಸನಾರೋಹಣ ಮಾಡಿದರು.
 ಸಿಂಹಾಸನಾರೂಢ ಶ್ರೀಗಳಿಗೆ ಟಿ. ಶ್ಯಾಮಭಟ್ ಅವರಿಂದ ದೇವೋಪಚಾರ, ರಾಜೋಪಚಾರ ಪೂಜೆ ನೆರವೇರಿತು.
ಬಳಿಕ ಸರ್ವವಾದ್ಯ ಸೇವೆ ಸೇರಿದಂತೆ ಅಷ್ಟಾವಧಾನ ಸೇವೆ ನೆರವೇರಿತು. ಬಳಿಕ ಕಪ್ಪಕಾಣಿಕೆ ಸಮರ್ಪಿಸಿ ದೀಪಾರಾಧನೆ ನೆರವೇರಿಸಲಾಯಿತು. ಸುಮಾರು ಎರಡೂವರೆ ಗಂಟೆಗೂ ಅಧಿಕ ಕಾಲ ಕಿರೀಟೋತ್ಸವ ಸಡಗರ ನಡೆಯಿತು. ಕೊನೆಯಲ್ಲಿ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು.
 ಮಠದ ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಳ್ ಇದ್ದರು. ಧರ್ಮಭಾರತೀ ಪ್ರಕಾಶನ ಮುಖ್ಯಸ್ಥ ವಿದ್ವಾನ್ ಜಗದೀಶ್ ಶರ್ಮಾ ನಿರೂಪಿಸಿದರು. ಇಮಾಮಿ ಗ್ರೂಪ್ ಅಧ್ಯಕ್ಷ ಆರ್.ಎಸ್. ಗೋಯಂಕಾ, ವ್ಯವಸ್ಥಾಪಕ ನಿರ್ದೇಶಕ ರಾಧೇಶ್ಯಾಮ್ ಅಗರ್‌ವಾಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಎಸ್. ಅಂಗಾರ, ಬಿಜೆಪಿ ಮುಖಂಡರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement